ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಮಾನವರಾದ ನಮ್ಮ ಜೀವನದಲ್ಲಿ ಎಲ್ಲದರಲ್ಲಿಯೂ ಯಶಸ್ವಿ ಕಾಣಬೇಕಾದರೆ ಮೊದಲು ದೇಹ ಬಲಿಷ್ಠವಾಗಿರಬೇಕು, ಅಂದರೆ ಮನಸ್ಸು ಕೂಡಾ ಬಲಿಷ್ಠವಾಗಿರುತ್ತದೆ ಎಂದು ಸ್ಥಳೀಯ ಪೋಲೀಸ್‌ಠಾಣೆಯ ಪಿಎಸ್‌ಐ ಶ್ರೀಮತಿ ಜ್ಯೋತಿ ಖೋತ್ ಅವರು ನುಡಿದರು.
ಮಂಗಳವಾರ ಸ್ಥಳೀಯ ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ದಲಿಂಗದೇವರ ಜನ್ಮೋತ್ಸವ ಅಂಗವಾಗಿ ಸ್ಥಳೀಯ ಕ್ರೀಡಾ ಯುವ ಘಟಕ ಸಂಘಟನೆಯ ವತಿಯಿಂದ ಎಸ್‌ಕೆ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾದ ಸಿದ್ದಲಿಂಗದೇವರ ಪ್ರಿಮಿಯರ್ ಲೀಗ್ ಸಿಸನ್ ೧(ಎಸ್‌ಪಿಎಲ್೧) ಕ್ರಿಕೇಟ್ ಪಂದ್ಯಾವಳಿಯನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠವು ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾಗಿದ್ದು ಶ್ರೀ ಮಠದ ಶ್ರೇಯಸ್ಸು ಘನತೆಯನ್ನು ಹೆಚ್ಚಿಸುತ್ತಾ ಸಾಗಿದ ಮಠದ ಪೀಠಾದಿಪತಿ ಸಿದ್ದಲಿಂಗದೇವರ ಜನ್ಮದಿನೋತ್ಸವ ಅಂಗವಾಗಿ ಇಂದು ಏರ್ಪಡಿಸಲಾದ ಕ್ರೀಕೆಟ್ ಕ್ರೀಡಾಕೂಟವು ಜನಮನ ರಂಜಿಸುವಂತಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಭಾರತೀಯ ಜನತಾಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ) ಅವರು ಮಾತನಾಡಿ, ಭಾರತ ದೇಶವು ಜ್ಞಾನ ವಿಜ್ಞಾನವನ್ನು ಎಲ್ಲವನ್ನು ಕೊಟ್ಟಿದೆ. ಅಂತಹದರಲ್ಲಿ ತಾಳಿಕೊಟೆಯ ನಗರದಲ್ಲಿಯ ಖಾಸ್ಗತ ಮಠದ ಸಿದ್ದಲಿಂಗದೇವರ ನಡೆನುಡಿ ಅವರ ಆಶೀರ್ವಚನವನ್ನು ಕೇಳಿದ ಎಲ್ಲ ಭಕ್ತಸಮೂಹ ಮೆಚ್ಚುಗೆ ಪಡುತ್ತಾ ಸಾಗಿದ್ದಾರೆ. ಅಂತಹ ಶ್ರೀಗಳ ಜನ್ಮೋತ್ಸವ ಕುರಿತು ಯುವಕರ ತಂಡ ಕ್ರಿಕೇಟ್ ಕ್ರೀಡಾಕೂಟವನ್ನು ಏರ್ಪಡಿಸಿ ಶ್ರೀಗಳ ಹೆಸರನ್ನು ಇನ್ನೂ ಉತ್ತುಂಗಕ್ಕೇರಿಸುವ ಕಾರ್ಯ ಮಾಡಿರುವದು ಸಂತಸದಾಯಕ ಸಂಗತಿಯಾಗಿದೆ ಎಂದರು.
ನಿವೃತ್ತ ಶಿಕ್ಷಕ ಬಸವರಾಜ ಕೊಡಗಾನೂರ ಅವರು ಮಾತನಾಡಿದರು.
ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಘೇಶ ವಿರಕ್ತಮಠ ಸಾನಿದ್ಯ ವಹಿಸಿದ್ದರು.
ಗಣ್ಯರಾದ ಶರಣಗೌಡ ಹೆಗರಡ್ಡಿ, ಬಸವರಾಜ ಕುಂಬಾರ, ಜಯಸಿಂಗ್ ಮೂಲಿಮನಿ, ಎನ್.ಎಸ್. ಸರಶೆಟ್ಟಿ, ಪ್ರಭುಗೌಡ ಮದರಕಲ್ಲ, ಕಾಶೀನಾಥ ಮುರಾಳ, ಎಂ.ಆರ್. ಕತ್ತಿ, ಜಯಭೀಮ ಮುತ್ತಗಿ, ಮಹಾಂತೇಶ ವಾಲಿ, ವಿರೇಶ ಸಾಸನೂರ, ರಾಜೇಶ ಹಜೇರಿ, ಸನರಾಜ್ ಪಾಟೀಲ, ಕಿರಣ್ ಕತ್ತಿ ಮೊದಲಾದವರು ಉಪಸ್ತಿತರಿದ್ದರು.
ರವಿವಾರ ಸಮಾರೋಪ
ಜೂ. ೨ ರಂದು ಉದ್ಘಾಟನೆಗೊಂಡ ಕ್ರಿಕೆಟ್ ಕ್ರೀಡಾಕೂಟದಲ್ಲಿ ತಾಳಿಕೋಟೆ ಪಟ್ಟಣ ಒಳಗೊಂಡು ಗ್ರಾಮೀಣ ವಲಯ ಒಳಗೊಂಡು ೮ ಟೀಮ್‌ಗಳು ಭಾಗವಹಿಸಿದ್ದು ಬರಲಿರುವ ದಿ. ೭ ರವಿವಾರರಂದು ಶ್ರೀ ಸಿದ್ದಲಿಂಗದೇವರ ಜನ್ಮದಿನದಂದು ಕ್ರೀಡಾಕೂಟ ವಿಜೇತ ತಂಡದವರಿಗೆ ಬಹುಮಾನ ವಿತರಿಸುವ ಕಾರ್ಯದೊಂದಿಗೆ ಮಂಗಲಗೊಳ್ಳಲಿದೆ.

