ವಿಜಯಪುರದ ಎಕ್ಸಲಂಟ್ ವಿಜ್ಞಾನ ಪ ಪೂ ಕಾಲೇಜಿನಲ್ಲಿ ಅದ್ದೂರಿಯಾಗಿ ನಡೆದ ಸ್ವಾಗತ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಐಸ್‌ಕ್ರೀಮ್ ಹಾಗೂ ಮೇಣದ ಬತ್ತಿಗೆ ಕರಗುವ ಗುಣವಿದೆ. ಆದರೆ ಕರಗುವಿಕೆಯ ಹಿಂದಿರುವ ಉದ್ಧೇಶ ವಿಭಿನ್ನವಾಗಿರುತ್ತದೆ. ಐಸ್‌ಕ್ರೀಮ್ ಸಮಯ ಇರುವ ಮೊದಲೆ ನನ್ನನ್ನು ತಿಂದು ತೃಪ್ತನಾಗು ಎಂದು ಹೇಳಿದರೆ ಮೇಣದ ಬತ್ತಿ ನಾನು ಕರಗುವ ಮೊದಲೇ ಈ ಜಗತ್ತಿಗೆ ಒಂದಷ್ಟು ಬೆಳಕನ್ನು ಕೊಡುತ್ತೇನೆ ಎನ್ನುವ ಸಾರ್ಥಕತೆ ತೋರುತ್ತದೆ. ನಮ್ಮ ಬದುಕು ಸಹ ಮೇಣದ ಬತ್ತಿಯಂತೆ ಬೇರೊಬ್ಬರಿಗೆ ಬೆಳಕು ನೀಡುವಂತಾಗಬೇಕು. ಎಂದು ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಎನ್ ಎಂ ಬಿರಾದಾರ ಹೇಳಿದರು.
ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ೨೦೨೬-೨೭ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು; ವಿದ್ಯೆ ಎನ್ನುವುದು ತಪ್ಪಸ್ಸಿದ್ದಂತೆ, ಸಂತ ಮಹಾಂತ ಋಷಿಮುನಿಗಳು ಏಕಾಗ್ರತೆಯಿಂದ ತಪಸ್ಸು ಮಾಡಿ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಂತೆ ವಿದ್ಯಾರ್ಥಿಗಳು ಸಹ ವಿದ್ಯೆ ಎನ್ನುವ ತಪಸ್ಸನ್ನು ಏಕಾಗ್ರತೆಯಿಂದ ಮಾಡಿದಲ್ಲಿ ಸಾಧನೆ ಎನ್ನುವ ಸಾಕ್ಷತ್ಕಾರವನ್ನು ಹೊಂದಬಹುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಾಗ್ಮಿ ಅಶೋಕ ಹಂಚಲಿ; ಒಬ್ಬ ಪೇಪರ್ ಹಾಕುವ ಹುಡುಗ ಈ ದೇಶಕ್ಕೆ ರಾಷ್ಟ್ರಪತಿಯಾಗುತ್ತಾನೆ ಎಂದ ಮೇಲೆ ನಮಗೇನಾಗಿದೆ ಎನ್ನುವ ಪ್ರಶ್ನೆಯನ್ನು ನಾವೇ ಮಾಡಿಕೊಳ್ಳಬೇಕು. ಕಾದ ಹಂಚಿನ ಮೇಲೆ ಬಿದ್ದ ನೀರಿನ ಹನಿಯೂ ಸಹ ಮುತ್ತಂತೆ ಭಾಸವಾಗುತ್ತದೆ. ಮುಂಜಾನೆ ಬಿದ್ದ ಮಂಜಿನ ಹನಿ ಬಿಸಿಲೇರಿದಂತೆ ಮುತ್ತಂತೆ ಹೊಳೆದು ಮಾಯವಾಗುತ್ತದೆ. ಆದರೆ ಸ್ವಾತಿ ಮಳೆಯ ಹನಿ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗ ಮಾತ್ರ ಅದು ಮುತ್ತಾಗಿ ಪರಿವರ್ತನೆಯಾಗುತ್ತದೆ ಅದು ಶಾಶ್ವತ ಮೌಲ್ಯ ಪಡೆಯುತ್ತದೆ. ಹಾಗೆಯೇ ಈ ವಿದ್ಯಾರ್ಥಿಗಳು ಸಹ ಇಂದು ಎಕ್ಸಲಂಟ್ ಎನ್ನುವ ಕಪ್ಪೆ ಚಿಪ್ಪಿನಲ್ಲಿ ಬಿದ್ದಾಗಿದೆ. ಇನ್ನು ಮುತ್ತಾಗುವುದು ಮಾತ್ರ ಬಾಕಿ ಇದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಬಸವನ ಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಚೇರಮನ್ ಬಸವರಾಜ್ ಕೌಲಗಿ, ಗೌರವ ನಿರ್ದೇಶಕ ರಾಜಶೇಖರ ಕೌಲಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲಾಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ ಜವಾಬ್ದಾರಿ ವಹಿಸಿಕೊಂಡ ಕೆ. ಎ. ಉಪ್ಪಾರ, ನಿಕಟಪೂರ್ವ ಉಪ ನಿರ್ದೇಶಕ ಡಾ. ಸಿ. ಕೆ. ಹೊಸಮನಿ, ನಿವೃತ್ತ ಪ್ರಾಂಶುಪಾಲ ಬಸವರಾಜ್ ಉಮರ್ಜಿ ಅವರನ್ನು ಸನ್ಮಾನಿಸಲಾಯಿತು.
ಕೂಡಿಗಿ ಸರ್ಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ಕೆ.ಜಿ.ಲಮಾಣಿ, ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಎಲ್ಲ ಉಪನ್ಯಾಸಕ ವರ್ಗ ಹಾಜರಿದ್ದರು.
ಕು.ಚಿನ್ಮಯಿ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ್ ಸ್ವಾಗತಿಸಿದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು.

