ಬಿಡದಿ ಟೌನ್ ಶಿಪ್, ಶರಾವತಿ ಪಂಪ್ಡ್ ಸ್ಟೋರೇಜ್, ಕ್ರಿಕೆಟ್ ಸ್ಟೇಡಿಯಂ ಯೋಜನೆ ಕೈಬಿಡದಿದ್ದರೆ ಹೋರಾಟ ನಿಶ್ಚಿತ :ಶಾಸಕ ಯತ್ನಾಳ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರ ಮರಣ ಶಾಸನ ಆಗಲಿರುವ ಬಿಡದಿ ಟೌನ್ ಶಿಪ್ ಯೋಜನೆ, ಪಶ್ಚಿಮ ಘಟ್ಟಗಳಿಗೆ ಮಾರಕವಾಗಲಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ಆನೇಕಲ್ ನ ಫಲವತ್ತಾದ ಭೂಮಿಯಲ್ಲಿ ಬರುತ್ತಿರುವ ಕ್ರಿಕೆಟ್ ಸ್ಟೇಡಿಯಂ ಯೋಜನೆಗಳನ್ನು ಮುಂಬರುವ ಸಂಪುಟ ಸಭೆಯಲ್ಲಿ ರದ್ದುಗೊಳಿಸದಿದ್ದರೆ, ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಿಯಲ್ ಎಸ್ಟೇಟ್ ಲಾಬಿಗೆ, ಬಂಡವಾಳಶಾಹಿಗಳ ಒತ್ತಡಕ್ಕೆ ಶರಣಾಗಿರುವ ಸರ್ಕಾರ ಒತ್ತಾಯಪೂರ್ವಕವಾಗಿ ರೈತರ ಜಮೀನನ್ನು ಪಡೆಯುತ್ತಿರುವುದು ಖಂಡನೀಯ. ರೇಷ್ಮೆ, ಮಾವು, ಅಡಿಕೆ, ಬಾಳೆ, ತರಕಾರಿ, ಹಲಸು, ಪೇರಳೆ ಹೀಗೆ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿರುವ ಬಿಡದಿಯ ರೈತರು ಸಮೃದ್ಧರಾಗಿದ್ದರೆ. ಸುಮಾರು 6500 ಎಕರೆಯ ಅತ್ಯಂತ ಫಲವತ್ತಾದ, ನೀರಾವರಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಸ್ವಾಧೀನಪಡೆಸಿಕೊಳ್ಳುತ್ತಿರುವ ಸರ್ಕಾರದ ಕ್ರಮ ಅತಾರ್ಕಿಕವಾದದ್ದು.
ಕೃಷಿಗೆ ಯೋಗ್ಯವಲ್ಲದ ಭೂಮಿಗಳಲ್ಲಿ ಕೈಗಾರಿಕೆಗಳು, ವಸತಿ ಯೋಜನೆಗಳನ್ನು ರೂಪಿಸಬೇಕೇ ಹೊರತು ಸಮೃದ್ಧವಾದ ಕೃಷಿ ಭೂಮಿಯಲ್ಲಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು ಕೃಷಿ ಭೂಮಿಯನ್ನು ವಸತಿ ಯೋಜನೆ, ಎ1 ಸಿಟಿಗೆ ಮೀಸಲಿಡುವುದು ಸರ್ಕಾರದ ದೂರದರ್ಶಿತ್ವದ ಕೊರತೆ ತೋರಿಸುತ್ತದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.

