ಉದಯರಶ್ಮಿ ದಿನಪತ್ರಿಕೆ
ಇಂಡಿ: ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಕೋರಿ ಸೋಮವಾರ ತಹಶಿಲ್ದಾರ ಬಿ ಎಸ್ ಕಡಕಭಾವಿ ಅವರ ಮುಖಾಂತರ ಸರಕಾರಕ್ಕೆ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು .
ಇಂಡಿ ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ರ್ಯಾಲಿ ಪ್ರಾರಂಭಿಸಿ ಬಸವೇಶ್ವರ ವೃತ್ತದ ಮೂಲಕ ತಾಲ್ಲೂಕು ಆಡಳಿತ ಸೌಧಕ್ಕೆ ತಲುಪಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯುವ ಅಲ್ಪಸಂಖ್ಯಾತರ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಿ ಡಿ ಇನಾಮದಾರ ಮಾತನಾಡಿ, ಭಾರತ ದೇಶವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಇಲ್ಲಿ ಪ್ರತಿಯೊಂದು ಜೀವಿಗೂ, ಪ್ರಕೃತಿಗೂ ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವಿದೆ. ಅದರಲ್ಲಿಯೂ ಮುಖ್ಯವಾಗಿ ಗೋವು (ಹಸು) ಭಾರತೀಯ ಸಂಸ್ಕೃತಿ, ಕೃಷಿ ಪ್ರಧಾನ ಆರ್ಥಿಕತೆ ಮತ್ತು ಕೋಟ್ಯಂತರ ಜನರ ಭಾವನೆಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಗೋವು ಕೇವಲ ಒಂದು ಪ್ರಾಣಿಯಲ್ಲ, ಅದು ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದೆ. ಶಾಂತಿ, ಕರುಣೆ ಮತ್ತು ಪೋಷಣೆಯ ಸಂಕೇತವಾಗಿರುವ ಹಸುವನ್ನು ಭಾರತದ ‘ರಾಷ್ಟ್ರ, ಪ್ರಾಣಿ’ ಎಂದು ಘೋಷಿಸುವುದು ಸೂಕ್ತ ಮತ್ತು ಗೌರವದ ವಿಷಯವಾಗಿದೆ. ಇದು ದೇಶದ ಸಾಂಸ್ಕೃತಿಕ ಐಕ್ಯತೆಯನ್ನು ಮತ್ತು ಜೀವ ವೈವಿಧ್ಯತೆಯ ಮೇಲಿರುವ ಗೌರವವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ. ಆ ಕಾರಣದಿಂದ ಕೂಡಲೇ ಸರಕಾರ ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ದಸ್ತಗೀರ್ ಇನಾಮದಾರ, ರಿಯಾಜ್ ಕೋರಬೊ, ಅಬ್ದುಲ್ ಚಂದನ ವಾಲೆ, ಮಹೇಬೂಬ ಕುಳ್ಳಕುಮಟಗಿ, ಬಿಲಾಲ್ ಡಾಂಗೆ, ಮುಸ್ತಫಾ ಇನಾಮದಾರ, ರಸೂಲ ಮಾಶಾಳಕರ, ದಸ್ತಗೀರ ಗಾಲಿಬವಾಲೆ, ಕಾನೂನು ಸಲಹೆಗಾರ ಎಂ ಬಿ ಮಾಣಿಕ, ಹಿರಿಯ ಮುಖಂಡ ಎಂ ಎಲ್ ದೇವೂರ, ಸಾದಿಕಾ ಕುಳ್ಳಕುಮಟಗಿ, ಗಜಾಲಾ ಮುಂಡೂಡಗಿ, ಶಕೀಲಾ ಗಾಲಿಬವಾಲೆ ನಗರ ಮತ್ತು ಗ್ರಾಮೀಣದ ಭಾಗದ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

