ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭ ಹಾಗೂ ಮೇಗಾ ಪೋಷಕರ ಸಭೆ ವಿಜೃಂಭಣೆಯಿಂದ ಆಚರಿಸಲಾಯಿತು.
ಮೊದಲ ದಿನವೇ ಶಾಲೆಯು ಮದುವಣಗಿತ್ತಿಯಂತೆ ಬಣ್ಣ ಬಣ್ಣದ ಬಲೂನ್, ರಿಬ್ಬನ್, ಹೂ-ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಶಾಲೆಯ ಆವರಣದಲ್ಲಿ ಚಿಣ್ಣರು ಹೊಸ ಬಟ್ಟೆ ತೊಟ್ಟು ಅತೀ ಉತ್ಸಾಹದಿಂದ ಓಡಾಡುತ್ತಿದ್ದು ಕಂಡು ಬಂತು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಶ್ರೀಶೈಲಪ್ಪ ಜೋಗೂರ ಹೊಸದಾಗಿ ಶಿಶುವಿಹಾರ ಹಾಗೂ ಒಂದನೆಯ ತರಗತಿಗೆ ದಾಖಲಾತಿ ಆದ ಸುರಕ್ಷಾ ರಾಜಶೇಖರ ಅಲೋಣಿ ಹಾಗೂ ಅನುಷ್ಕಾ ವಿಲಾಸ ಅಲೋಣಿ ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್ ಬುಕ್, ಕಂಪಾಸ್ ಪೆಟ್ಟಿಗೆ ಹಾಗೂ ಪಠ್ಯಪುಸ್ತಕ ಉಚಿತವಾಗಿ ಕೊಡಮಾಡುವ ಮುಖಾಂತರ ಸ್ವಾಗತಿಸಿದರು. ಶಿಕ್ಷಕವೃಂದದವರು ಎಲ್ಲಾ ಮಕ್ಕಳ ಮೇಲೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಮಕ್ಕಳಿಗೆ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಜೋಗೂರವರು ಉಜ್ವಲ ಭವಿಷ್ಯ, ಉಜ್ವಲ ಕಲಿಕೆ ಎಂಬ ಹೊಸ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ಶಾಲಾ ಪ್ರಾರಂಬೋತ್ಸವವು ಅತ್ಯಂತ ವಿಜೃಂಭಣೆಯಿಂದ ಉಚಿತ ಪಠ್ಯಪುಸ್ತಕ ಕೊಡಮಾಡುವುದರ ಮುಖಾಂತರ ಪುಷ್ಪಾರ್ಚನೆ ಮಾಡುವುದರ ಮುಖಾಂತರ ದೇವರ ಸ್ವರೂಪರಾದ ಮಕ್ಕಳಿಗೆ ಸ್ವಾಗತಿಸಿರುವುದು ಸಂತೋಷ ತಂದಿದೆ ಎಂದರು.
ಈ ವೇಳೆ ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ, ಸರುಬಾಯಿ ಬಂಡಗರ, ಸುನೀತಾ ಗುಂಡದ ಮುಂತಾದವರು ಉಪಸ್ಥಿತರಿದ್ದರು

