ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳು ನಡೆಸಿದ ವಿಶೇಷ ದಾಳಿಯಲ್ಲಿ ಕಳ್ಳಭಟ್ಟಿ ಸರಾಯಿ ಮತ್ತು ಬೆಲ್ಲದ ರಸಾಯನವನ್ನು ಜಪ್ತಿ ಮಾಡಲಾಗಿದ್ದು, ಆರೋಪಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾನ್ಯ ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಬೆಳಗಾವಿ ಹಾಗೂ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಬೆಳಗಾವಿ ಅವರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ ಆಯುಕ್ತರು ವಿಜಯಪುರ ಜಿಲ್ಲೆ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ವಲಯಗಳ ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿ ಸಾಮೂಹಿಕ ಅಬಕಾರಿ ದಾಳಿ ನಡೆಸಿದರು.ಈ ವೇಳೆ ಬಂದ ಖಚಿತ ಮಾಹಿತಿಯ ಮೇರೆಗೆ ವಿಜಯಪುರ ನಗರದ ಹರಣಶಿಕಾರಿ ಕಾಲನಿಯ ಮರಗಮ್ಮ ದೇವಸ್ಥಾನದ ಸಮೀಪದಲ್ಲಿರುವ ಲೈಲಾ ಶಿವಕುಮಾರ ಉರ್ಫ್ ಶಿವಾಜಿ ಜುಮನಾಳ ಅವರ ನಿವಾಸದ ಮೇಲೆ ದಾಳಿ ನಡೆಸಲಾಯಿತು.ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು 3.5 ಲೀಟರ್ ಕಳ್ಳಭಟ್ಟಿ ಸರಾಯಿ ಹಾಗೂ 1 ಲೀಟರ್ ಬೆಲ್ಲದ ರಸಾಯನ ವನ್ನು ಜಪ್ತಿ ಮಾಡಿದರು.
ಈ ಸಂಬಂಧ ಆರೋಪಿತೆ ಲೈಲಾ ಶಿವಕುಮಾರ ಉರ್ಫ್ ಶಿವಾಜಿ ಜುಮನಾಳ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಘೋರ ಪ್ರಕರಣ ದಾಖಲಿಸಲಾಗಿದೆ.ವಿಜಯಪುರ ವಲಯದ ಅಬಕಾರಿ ಉಪ ನಿರೀಕ್ಷಕರಾದ ಮಲ್ಲಣ್ಣ ಆರ್. ನಿಲಜಕರ ಅವರು ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ಮಲ್ಲಣ್ಣ ಆರ್. ನಿಲಜಕರ, ಅಬಕಾರಿ ಮುಖ್ಯ ಪೇದೆ ಪ್ರವೀಣ ಪಾಟೀಲ, ಅಬಕಾರಿ ಪೇದೆ ಈರಣ್ಣ ಆರ್. ಹಟ್ಟಿ, ಶ್ರೀಶೈಲ ಬಂಡಗಾರ ಸೇರಿದಂತೆ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

