ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ.. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಕಿವಿ, ಮೂಗು ಹಾಗೂ ಗಂಟಲು ವಿಭಾಗದಲ್ಲಿ ಶುಕ್ರವಾರ ಅತ್ಯಾಧುನಿಕ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಸುಮಾರು ಒಂದು ವರ್ಷ ಏಳು ತಿಂಗಳ ಜನ್ಮಜಾತ ಕಿವುಡುತನ ಹೊಂದಿರುವ ಮಗುವಿಗೆ ಅತ್ಯಾಧುನಿಕ ನೆಕ್ಸಾ(NEXA 1022) ಕಾಕ್ಲಿಯರ್ ಇಂಪ್ಲಾಂಟ್ ಉಪಕರಣವನ್ನು ಒಳಕಿವಿಯ ಭಾಗದಲ್ಲಿ ಅಳವಡಿಸಲಾಯಿತು. ಈ ಉಪಕರಣವು ಮಾತನಾಡುವ ಧ್ವನಿಗಳನ್ನು ವಿದ್ಯುತ್ ಪ್ರೇರಣೆಯಾಗಿ ಪರಿವರ್ತಿಸಿ, ಕಿವಿಯ ನರಗಳನ್ನು ಉತ್ತೇಜಿಸುವ ಮೂಲಕ ಮೆದುಳಿಗೆ ಸಂದೇಶಗಳನ್ನು ಕಳುಹಿಸಿ, ಪದಗಳನ್ನು ಸ್ಪಷ್ಟವಾಗಿ ಕೇಳಿಸಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಶಸ್ತ್ರಚಿಕಿತ್ಸೆಯಲ್ಲಿ ಬಳಸಲಾದ ಸ್ಮಾರ್ಟ್ ನಾವ್(SMART NAV) ತಂತ್ರಜ್ಞಾನವು ಮೊಬೈಲ್ ಜೊತೆ ನೇರ ಸಂಪರ್ಕ ಹೊಂದಿದ್ದು, ಡೈರೆಕ್ಟ್ ಸ್ಟ್ರೀಮಿಂಗ್ ಮತ್ತು ಟ್ರ್ಯಾಕಿಂಗ್ ಸೌಲಭ್ಯವನ್ನು ಒದಗಿಸುತ್ತದೆ. ಈ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಉತ್ತರ ಕರ್ನಾಟಕ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ನಡೆದಿರುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ, ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯಲ್ಲಿ ಈ ರೀತಿಯ ಚಿಕಿತ್ಸೆಗಳು ನಡೆಯುತ್ತಿದ್ದು, ಚಿಕಿತ್ಸೆ ಪಡೆದ ಮಕ್ಕಳು ವಾಕ್ ಮತ್ತು ಶ್ರವಣ ತಜ್ಞರಿಂದ ತರಬೇತಿ ಪಡೆದು ಸಾಮಾನ್ಯ ಮಕ್ಕಳಂತೆ ಮಾತನಾಡಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ವೈದ್ಯಕೀಯ ಮಹವಿದ್ಯಾಲಯದ ಪ್ರಾಚಾರ್ಯೆ ಮತ್ತು ತಜ್ಞವೈದ್ಯೆ ಡಾ. ತೇಜಸ್ವಿನಿ ವಲ್ಲಭ ಮಾತನಾಡಿ, ಜನ್ಮಜಾತ ಕಿವುಡುತನ ಹೊಂದಿರುವ ಮಕ್ಕಳಿಗೆ ಎರಡು ವರ್ಷದೊಳಗೆ ಚಿಕಿತ್ಸೆ ನೀಡಿದರೆ ಅವರು ಇತರ ಮಕ್ಕಳಂತೆ ಶಿಕ್ಷಣ ಪಡೆದು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತoz. ಮೂರು ವರ್ಷಗಳ ನಂತರ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ ಎಂದು ಹೇಳಿದರು.
ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳ ಸಂಯೋಜಕಿ ಡಾ. ಎಚ್. ಟಿ. ಲತಾದೇವಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಎನ್. ಬೆಂಟೂರ, ಆಸ್ಪತ್ರೆಯ ವೈದ್ಯಕೀಯ ಉಪಅಧೀಕ್ಷಕ, ಡಾ. ರವಿಕುಮಾರ ಬಿರಾದಾರ ಸೇರಿದಂತೆ ನಾನಾ ವೈದ್ಯರು ಮತ್ತು ಮಗುವಿನ ಪೋಷಕರು ಉಪಸ್ಥಿತರಿದ್ದರು.

