ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅತ್ಯಾಧುನಿಕ ಆರೋಗ್ಯ ಸೇವೆಯನ್ನು ಸಮಾಜದ ಪ್ರತಿಯೊಬ್ಬರಿಗೂ ಸುಲಭವಾಗಿ ಮತ್ತು ಸಮಾನವಾಗಿ ತಲುಪಿಸುವ ಉದ್ದೇಶದಿಂದ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಉಚಿತ ಮಾನವ ಶ್ವೇತ ರಕ್ತಕಣ ಪ್ರತಿಜನಕ ಹೊಂದಾಣಿಕೆ ಎಚ್.ಎಲ್.ಎ (Human Leukocyte Antigen Typing) ಪರೀಕ್ಷೆ ಶಿಬಿರ ನಡೆಯಿತು.
ಭಾರತೀಯ ಮಕ್ಕಳ ವೈದ್ಯರ ಸಂಘ ವಿಜಯಪುರ ಶಾಖೆ ಮತ್ತು ಎನ್. ಎಚ್. ಮಜುಂದಾರ ಶಾ ವೈದ್ಯಕೀಯ ಕೇಂದ್ರದ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಉಚಿತವಾಗಿ ಅಂಗಾಂಗ ಪ್ರತಿರೋಪಣೆಗೆ ಅತ್ಯಂತ ಮಹತ್ವದ ಹೊಂದಾಣಿಕೆ ಪರೀಕ್ಷೆ ನಡೆಸಲಾಯಿತು.
ಈ ಶಿಬಿರದಲ್ಲಿ ಒಟ್ಟು 40 ರೋಗಿಗಳು ಉಚಿತ ಪರೀಕ್ಷೆಯ ಸೌಲಭ್ಯವನ್ನು ಪಡೆದುಕೊಂಡರು. ಸುಮಾರು ರೂ. 1.60 ಲಕ್ಷ ಮೌಲ್ಯದ ಅತ್ಯಾಧುನಿಕ ಪರೀಕ್ಷೆಗಳನ್ನು ಯಾವುದೇ ಶುಲ್ಕವಿಲ್ಲದೆ ನಡೆಸಲಾಗಿದ್ದು, ಪ್ರತಿ ರೋಗಿಗೂ ಸರಾಸರಿ ರೂ. 4 ಸಾವಿರ ವೆಚ್ಚ ಉಳಿತಾಯವಾದಂತಾಗಿದೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಎಂ. ಪಾಟೀಲ, ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಅರುಣ್ ಸಿ. ಇನಾಮದಾರ ಹಾಗೂ ಪ್ರಾಂಶುಪಾಲೆ ಡಾ. ತೇಜಸ್ವಿನಿ ವಲ್ಲಭ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪರೀಕ್ಷೆ ಶಿಬಿರದಲ್ಲಿ ಕಿರಣ್ ಮಜುಂದಾರ ಶಾ ವೈದ್ಯಕೀಯ ಕೇಂದ್ರದ ಮಕ್ಕಳ ರಕ್ತ ಹಾಗೂ ಕ್ಯಾನ್ಸರ್ ತಜ್ಞೆ ಡಾ. ಶೋಭಾ ಬಡಿಗೇರ, ಬಿ.ಎಲ್.ಡಿ.ಇ. ಸಂಸ್ಥೆಯ ಮಕ್ಕಳ ರಕ್ತ ಮತ್ತು ಕ್ಯಾನ್ಸರ್ ತಜ್ಞ ಡಾ. ಅತುಲ ಥೊಬ್ಬಿ, ಆರೋಗ್ಯ ವಿಜ್ಞಾನ ವಿಭಾಗದ ಡೀನ್ ಡಾ. ಎಸ್. ವಿ. ಪಾಟೀಲ, ಡಾ. ಎಸ್. ಎಸ್. ಕಲ್ಯಾಣಶೆಟ್ಟರ ಹಾಗೂ ಡಾ. ಸಿದ್ದು ಚರ್ಕಿ ಮುಂತಾದವರು ಉಪಸ್ಥಿತರಿದ್ದರು.
