ಶಾಸಕ ಅನಿಲ್ ಚಿಕ್ಕಮಾದು ಬಳಿ ನಿಯೋಗ ಕರೆದೊಯ್ಯಲು ನಿರ್ಧಾರ
ಉದಯರಶ್ಮಿ ದಿನಪತ್ರಿಕೆ
ಸರಗೂರು: ತಾಲೂಕಿನ ಶಕ್ತಿದೇವತೆ ಶ್ರೀ ಚಿಕ್ಕದೇವಮ್ಮ ಬೆಟ್ಟದ ತಪ್ಪಲಿನಲ್ಲಿರುವ ಹಾಲುಗಡದ ಗಣೇಶ ದೇವಾಲಯದ ಸಮೀಪ ತಲೆಯೆತ್ತಿರುವ ಮದ್ಯದಂಗಡಿ ತೆರವುಗೊಳಿಸುವ ಸಂಬಂಧ ಶಾಸಕ ಅನಿಲ್ ಚಿಕ್ಕಮಾದು ಬಳಿಗೆ ನಿಯೋಗ ಕರೆದೊಯ್ಯಲು ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ತಾಲೂಕಿನ ಹಾಲುಗಡದ ಬಳಿ ನಡೆದ ಸಭೆಯಲ್ಲಿ ಇಟ್ನಾ, ಸರಗೂರು ಟೌನ್, ಚಾಮೇಗೌಡನಹುಂಡಿ, ಶಾಂತಿಪುರ, ಪುರದಕಟ್ಟೆ, ಕುನ್ನಪಟ್ಟಣ , ಮಂಚಹಳ್ಳಿ , ಕೊತ್ತೇಗಾಲ, ಸಾಗರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು. ಪ್ರಗತಿಪರ ಚಿಂತಕರು, ಮಹಿಳಾ, ರೈತ ಹಾಗೂ ಕನ್ನಡಪರ ಸಂಘಟನೆಗಳು, ಭಕ್ತರು, ಜನಪ್ರತಿನಿಧಿಗಳು ಭಾಗವಹಿಸಿ, ಧಾರ್ಮಿಕ ಕ್ಷೇತ್ರಕ್ಕೆ ಅಪಕೀರ್ತಿ ತರಲು ತಲೆಯೆತ್ತಿರುವ ಬಾರ್ ತೆರವುಗೊಳಿಸುವ ಸಂಬಂಧ ಹೋರಾಟದ ರೂಪುರೇಷೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ತಮ್ಮ ಅಭಿಪ್ರಾಯ, ಸಲಹೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಹಾಲುಗಡ ಶ್ರೀ ಚಿಕ್ಕದೇವಮ್ಮ ದೇವಸ್ಥಾನ ಜಾತ್ರಾ ಸಮಿತಿ ಅಧ್ಯಕ್ಷ ದೊಡ್ಡವೀರನಾಯಕ, ವರ್ಷದ ಹಿಂದೆಯಷ್ಟೇ ಬಾರ್ ತೆರೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿತ್ತು. ತಕ್ಷಣವೇ ನಾವು ಹೆಚ್ ಡಿ ಕೋಟೆಯಲ್ಲಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಬಾರ್ ಓಪನ್ ಮಾಡಲು ಅವಕಾಶ ನೀಡದಂತೆ ಮನವಿ ಪತ್ರ ಕೂಡ ನೀಡಿದ್ದೆವು. ಇಷ್ಟಾದರೂ ಬಾರ್ ತೆರೆಯಲಾಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಹೆಸರುವಾಸಿಯಾಗಿರುವ ಈ ಜಗದಲ್ಲಿ ಯಾವುದೇ ಕಾರಣಕ್ಕೂ ನಾವು ಬಾರ್ ನಡೆಸಲು ಬಿಡಬಾರದು. ಕಾನೂನು ರೀತಿಯಲ್ಲೇ ಹೋರಾಟ ಮಾಡೋಣ . ಅದಕ್ಕೂ ಮೊದಲು ಶಾಸಕ ಅನಿಲ್ ಚಿಕ್ಕಮಾದು ಅವರ ಗಮನಕ್ಕೆ ತರೋಣ. ಶೀಘ್ರದಲ್ಲೇ ದಿನಾಂಕ ನಿಗದಿ ಮಾಡಿ, ಎಲ್ಲರು ಶಾಸಕರ ಬಳಿ ತೆರಳಿ, ಬಾರ್ ಮುಚ್ಚಿಸುವಂತೆ ಮನವಿ ಮಾಡೋಣ. ಈ ಪ್ರಯತ್ನವು ಫಲ ಕೊಡದಿದ್ದರೆ, ಕಾನೂನು ರೀತಿಯಲ್ಲೇ ಹೋರಾಟ ಮಾಡೋಣ. ಅಲ್ಲಿಯವರೆಗೆ ಎಲ್ಲರೂ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದರು.
ಸಭೆಯಲ್ಲಿ ದೊಡ್ಡವೀರನಾಯಕ, ಬಸವನಾಯಕ, ಸಿದ್ದರಾಜು ಕಾಳಿಂಗನಾಯಕ, ಜಯರಾಮು, ಬಸವರಾಜು, ಚಾಮನಾಯಕ, ಸಣ್ಣಸ್ವಾಮಿನಾಯಕ, ಚಿನ್ನನಾಯಕ, ಲಿಂಗರಾಜು, ಬೆಟ್ಟನಾಯಕ, ಸುರೇಶ, ಚಿಕ್ಕಣ್ಣ , ವೆಂಕಟೇಶನಾಯಕ, ನವೀನ್ ಕುಮಾರ್ , ಫೈನಾನ್ಸ್ ಬಸವರಾಜು, ಶ್ರೀನಿವಾಸ, ರವಿಕುಮಾರ್, ಕೃಷ್ಣ, ಸೋಮನಾಯಕ, ಗುಡಿಗೌಡರು ರವಿಕುಮಾರ್, ಬಸವರಾಜನಾಯಕ, ಶಿವಾರ್ಚಕ ಮಹದೇವಸ್ವಾಮಿ, ಗುಡಿಗೌಡರು ಮಂಜುನಾಥ್, ಶಿವಣ್ಣ, ಬಿ ಬೆಟ್ಟನಾಯಕ, ಚೆನ್ನನಾಯಕ, ಚಿಕ್ಕನಾಯಕ, ಕೂಸಣ್ಣ, ಮಹದೇವು, ಗೋಪಾಲಗೌಡರು, ಶಂಕರ್, ನಾಗರಾಜು, ವೈಕುಂಠನಾಯಕ, ಜವರನಾಯಕ. ವೇಣು, ಮಣಿ, ಸಣ್ಣಸ್ವಾಮಿ, ಗ್ರಾಮೀಣ ಮಹೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು, ಭಕ್ತರು ಉಪಸ್ಥಿತರಿದ್ದರು.
ಪಿಡಿಒಗೆ ತರಾಟೆ
ಸ್ಥಳಕ್ಕೆ ಬಂದ ಕೊತ್ತೇಗಾಲ ಗ್ರಾಂ.ಪಂ. ಪಿಡಿಒ ನಾಗೇಂದ್ರ ಅವರಿಗೆ ಜನರು ತೀವ್ರ ತರಾಟೆಗೆ ತೆಗೆದುಕೊಂಡರು.
ಇದೊಂದು ಧಾರ್ಮಿಕ ಕ್ಷೇತ್ರ ಅನ್ನೋದನ್ನ ಮರೆತು ಯಾವ ಆಧಾರದ ಮೇಲೆ ಬಾರ್ ತೆರೆಯಲು ಎನ್ ಒಸಿ ಕೊಟ್ಟಿದ್ದೀರಾ ಎಂದು ಪ್ರಶ್ನೆಗಳ ಸುರಿಮಳೆಗೈದರು.

