ಶಬ್ಬೀರ ಅತ್ತಾರ ಸೇರಿದಂತೆ ನಿರಾಳೆ ಕುಟುಂಬದ ಐವರಿಗೆ ಅಂತಿಮ ವಿದಾಯ | ಕುಟುಂಬಸ್ಥರ ಆಕ್ರಂದನ | ಹತ್ಯೆಗೆ ಸಂಬಂಧಿಸಿದಂತೆ 12 ಜನರ ಮೇಲೆ ಎಫ್‌ಐಆರ್ ದಾಖಲು
ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಶುಕ್ರವಾರ ನಡೆದ ಭೀಕರ ಸಾಮೂಹಿಕ ಹತ್ಯೆ ಪ್ರಕರಣ ಇಡೀ ಭೀಮಾತೀರ ಪ್ರದೇಶವನ್ನು ಬೆಚ್ಚಿಬೀಳಿಸಿದ್ದು, ಹತ್ಯೆಗೀಡಾದ ನಿರಾಳೆ ಕುಟುಂಬದ ಐವರು ಸದಸ್ಯರ ಅಂತ್ಯಸಂಸ್ಕಾರ ಶನಿವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ನೆರವೇರಿತು.
ಹತ್ಯೆಗೀಡಾದ ಚಡಚಣ ಪಟ್ಟಣದ ನಿವಾಸಿಗಳಾದ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಂದು ಅಲಿಯಾಸ್ ಚಂದ್ರಶೇಖರ ನಿರಾಳೆ, ಶಿವಪುತ್ರ ನಿರಾಳೆ, ದುಂಡಪ್ಪ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ ಹಾಗೂ ಶಬ್ಬೀರ ಅತ್ತಾರ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಗೆ ಶುಕ್ರವಾರ ಸಾಗಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಶನಿವಾರ ಮೃತದೇಹಗಳನ್ನು ಚಡಚಣಕ್ಕೆ ತರಲಾಯಿತು.
ಮಧ್ಯಾಹ್ನ ಸುಮಾರು 2 ಗಂಟೆಗೆ ಪಟ್ಟಣದ ಹಳ್ಳದ ದಂಡೆಯಲ್ಲಿರುವ ಸ್ಮಶಾನ ಭೂಮಿಯಲ್ಲಿ ನಿರಾಳೆ ಕುಟುಂಬದ 5 ಜನರನ್ನು ಹಿಂದೂ ಸಂಪ್ರದಾಯದಂತೆ ಸಾಮೂಹಿಕವಾಗಿ ಅಗ್ನಿಸ್ಪರ್ಷದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಮೃತದೇಹಗಳು ಆಂಬುಲೆನ್ಸ್ ಮೂಲಕ ಸ್ಮಶಾನಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಬಂಧುಗಳು, ಆಪ್ತಮಿತ್ರರ ಆಕ್ರಂದನ ಮುಗಿಲು ಮುಟ್ಟಿತು.
ಇನ್ನೊಂದೆಡೆ, ಈ ಪ್ರಕರಣದಲ್ಲಿ ಮೃತಪಟ್ಟ ಚಡಚಣ ಪಟ್ಟಣದ ನಿವಾಸಿ ಶಬ್ಬೀರ ಅತ್ತಾರ ಅವರ ಅಂತ್ಯಕ್ರಿಯೆಯನ್ನು ಖಬ್ರಸ್ತಾನದಲ್ಲಿ ನೆರವೇರಿಸಲಾಯಿತು.
ಮೃತರ ಅಂತಿಮ ದರ್ಶನ ಪಡೆಯಲು ಅಪಾರ ಸಂಖ್ಯೆಯ ಬಂಧು-ಬಳಗ, ಸ್ನೇಹಿತರು ಹಾಗೂ ಸಾರ್ವಜನಿಕರು ಆಗಮಿಸಿದ್ದರು.
12 ಜನರಿಂದ ಕೃತ್ಯ :ಆರೋಪ
ಪ್ರಕರಣದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಡಚಣ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ.
ಚೈತನ್ಯಕುಮಾರ ದುಂಡಪ್ಪ ನಿರಾಳೆ ಅವರು ಚಡಚಣ ಪೋಲಿಸ್ ಠಾಣೆಯಲ್ಲಿ ಕೊಟ್ಟ ಫಿರ್ಯಾದಿ ಪ್ರಕಾರ ಚಡಚಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 12 ಜನರು ಕೂಡಿ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ್ದು ಕಲ್ಲನಗೌಡ.ಈ.ಪಾಟೀಲ, ಅಪ್ಪುಗೌಡ.ಲ.ಪಾಟೀಲ, ಈಶ್ವರಪ್ಪ.ಲ.ಪಾಟೀಲ, ಪ್ರಕಾಶ .ಬ.ಪಾಟೀಲ(ಮಾಸ್ತರು), ಪ್ರಶಾಂತ ಉರ್ಫ ಪರುಗೌಡ.ಬ.ಪಾಟೀಲ, ಸಿದ್ದರಾಮ ಕ.ಪಾಟೀಲ, ಲಾಯಪ್ಪ.ನಿ.ಬಿರಾದಾರ, ಚಿದಾನಂದ.ನಾ.ಕೋಳಿ ಉರ್ಫ ಟಕ್ಕಳಕಿ, ಮಾಸಿದ್ದ.ಶ್ರೀ.ಬಿರಾದಾರ, ಶ್ರೀಮಂತ.ಶ.ಬಿರಾದಾರ, ಶಂಕ್ರೆಪ್ಪ.ಮಾ.ಅರಕೇರಿ, ಅಪ್ಪಾಸಾಬ.ಶ.ಬೋವಿ ಈ 12 ಜನರು ಗೋವಿಂದಪುರದ ನಿವಾಸಿಗಳಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಗೋವಿಂದಪುರ ಗ್ರಾಮ ಹಾಗೂ ಚಡಚಣ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹತ್ಯೆಯ ಹಿಂದಿನ ಕಾರಣಗಳು ಹಾಗೂ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

