ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕಳೆದ ಏಳು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿಯು 2025-26ನೇ ಸಾಲಿನಲ್ಲಿ ಸುಮಾರು 5 ಕೋಟಿ ರೂಪಾಯಿ ವರೆಗೆ ಉತ್ತಮ ಲಾಭ ಗಳಿಸುತ್ತಾ ಜನಪರ ಸೇವೆ ನೀಡುತ್ತಿದೆ ಎಂದು ಮಾಜಿ ಶಾಸಕ ಅನಂದ ನ್ಯಾಮಗೌಡ ಹೇಳಿದರು.
ನಗರದ ಶ್ರೀ ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿ ಬ್ಯಾಂಕ್ ಸಭಾಭವನದಲ್ಲಿ ದಿ. ಸಿದ್ದು ನ್ಯಾಮಗೌಡ ಅವರ 8 ನೇ ಪುಣ್ಯಸ್ಮರಣೆ ಅಂಗವಾಗಿ ಶ್ರೀ ಸಿದ್ದು ನ್ಯಾಮಗೌಡ ಕ್ರೀಡಾ ಅಕಾಡೆಮಿಗೆ 5 ಲಕ್ಷ ರೂಪಾಯಿ ಮೊತ್ತದ ಕಬ್ಬಡಿ ಮ್ಯಾಟ್ ವಿತರಿಸಿ ಅವರು ಮಾತನಾಡಿದರು. ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಹಕಾರಿ ಸಂಸ್ಥೆ ನಿರಂತರವಾಗಿ ಕ್ರೀಡಾಪಟುಗಳಿಗೆ ನೆರವು ನೀಡುತ್ತ ಬಂದಿದೆ. 2022-23ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಶ್ರೀ ಸಿದ್ದು ನ್ಯಾಮಗೌಡ ಕ್ರೀಡಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಬಡ ಕ್ರೀಡಾಪಟುಗಳ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸಹಕಾರಿ ವತಿಯಿಂದ 1,25,000 ರೂ. ಧನಸಹಾಯ ನೀಡಲಾಗಿದೆ ಎಂದು ತಿಳಿಸಿದರು.
ಅದೇ ರೀತಿ 2023-24 ನೇ ಸಾಲಿನಲ್ಲಿ ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದ ಗ್ರಾಮೀಣ ಯುವ ಸೈಕ್ಲಿಂಗ್ ಪಟು ಕು. ಆಯಿಷಾ ಮೋಮಿನ್ ಅವರು ಕಿರಿಯ ವಯಸ್ಸಿನಲ್ಲಿ ಸೈಕ್ಲಿಂಗ್ ಕ್ಷೇತ್ರದಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಸುಮಾರು 5 ಲಕ್ಷ ರೂ. ಮೌಲ್ಯದ ರೇಸಿಂಗ್ ಸೈಕಲ್ ಅನ್ನು ಸಹಕಾರಿ ವತಿಯಿಂದ ನೀಡಲಾಗಿದೆ ಎಂದರು.
2024-25ನೇ ಸಾಲಿನಲ್ಲಿ ಜಮಖಂಡಿ ತಾಲೂಕಿನ ಗಣಿ ಗ್ರಾಮದ ಬಡ ಜೂಡೋ ಕ್ರೀಡಾಪಟು ಕು. ರಕ್ಷಿತಾ ರವೀಂದ್ರ ಕೋಮಾರ ಅವರಿಗೆ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ 1 ಲಕ್ಷ ರೂ. ಧನಸಹಾಯ ಒದಗಿಸಲಾಗಿದೆ ಎಂದು ಹೇಳಿದರು.
ಸಹಕಾರಿ ಸಂಸ್ಥೆಯು ರೈತರ ಅನುಕೂಲಕ್ಕಾಗಿ ರಸಗೊಬ್ಬರ, ಬೀಜ ಹಾಗೂ ಕೀಟನಾಶಕ ಮಾರಾಟ ಮಳಿಗೆಯನ್ನು ಸ್ಥಾಪಿಸಿದ್ದು, ಯೋಗ್ಯ ದರದಲ್ಲಿ ರೈತರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ನಮ್ಮ ಅಕಾಡೆಮಿಯಲ್ಲಿ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಪ್ರೋ ಕಬ್ಬಡಿ ಹಾಗೂ ಖೇಲೋ ಇಂಡಿಯಾ ಸ್ಪರ್ಧೆಗಳಲ್ಲಿ ಸ್ಥಾನ ಪಡೆದಿದ್ದಾರೆ. ರಾಷ್ಟ್ರಮಟ್ಟದ ಕಬ್ಬಡಿ ತಂಡಗಳಲ್ಲಿಯೂ ಸುಮಾರು 8 ರಿಂದ 10 ಮಂದಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕಾರ್ಯವನ್ನು ಸಹಕಾರಿ ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ನ್ಯಾಮಗೌಡ, ಜಕನೂರ, ಗುರಪ್ಪ ಗಲಗಲಿ, ಈಶ್ವರ ಚೌದರಿ, ಭಾಸ್ಕರ ಬಡಿಗೇರ, ಮೂರ್ತಿ ಕರಾಜಗೋಳ, ನಿಂಗಪ್ಪ ಕಡಪಟ್ಟಿ, ರವಿ ಯಡಹಳ್ಳಿ, ಭೀಮಪ್ಪ ಬೆಳಗಲಿ, ಅನ್ವರ್ ಮೊಮಿನ್ ಸೇರಿದಂತೆ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

