ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಸವ್ವೆ ಕ್ಲಸ್ಟರ್ ಮಟ್ಟದ ವತಿಯಿಂದ ವಡ್ಡರಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ಮಕ್ಕಳ ದಾಖಲಾತಿಗಾಗಿ ಪ್ರಚಾರಂದೋಲನ ನಡೆಯಿತು.
ಸವ್ವೆ ಕ್ಲಸ್ಟರ್ ಮಟ್ಟದಲ್ಲಿ 16ಶಾಲೆಗಳಿದ್ದು ಈ ಶಾಲೆಗಳ ಎಲ್ಲಾ ಶಿಕ್ಷಕರು ಸೇರಿ ಇಂದಿನಿಂದ ಎಲ್ಲಾ ಹಳ್ಳಿಗಳಲ್ಲಿಯೂ ದಾಖಲಾತಿ ಪ್ರಚಾರಂದೋಲನ ಆರಂಭಿಸಿದ್ದಾರೆ. ಈ ಆಂದೋಲನದಲ್ಲಿ ಶಿಕ್ಷಕರು ಮತ್ತು ಮಕ್ಕಳು ಊರಿನ ಪ್ರತಿ ಮನೆಗೂ ಭೇಟಿ ನೀಡಿ ಒಂದನೇ ತರಗತಿಯಿಂದಲೇ ಸರ್ಕಾರಿ ಶಾಲೆಗೆ ಮಗುವನ್ನು ಸೇರಿಸಿ ಎಂದು ಪೋಷಕರನ್ನ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ.
ವಡ್ಡರಗುಡಿ ಗ್ರಾಮದ ಬೀದಿ ಬೀದಿಯಲ್ಲೂ ಪ್ರಚಾರ ಕೈಗೊಂಡ ಶಿಕ್ಷಕರು ಉತ್ತಮ ಕಲಿಕೆ ಉಜ್ವಲ ಭವಿಷ್ಯಕ್ಕೆ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಘೋಷಣೆ ಕೂಗುತ್ತಾ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯಶಿಕ್ಷಕ ದೇವರಾಜ್ ಮಾತನಾಡಿ, ಪಟ್ಟಣಕ್ಕೆ ಕೂಗಳತೆಯ ದೂರದಲ್ಲಿದ್ದರು ಈ ಗ್ರಾಮದವರು ನಮ್ಮ ಸರ್ಕಾರಿ ಶಾಲೆಗೆ ಮಕ್ಕಳನ್ನ ಸೇರಿಸಿ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಮಕ್ಕಳಲ್ಲಿಯೂ ಕಲಿಕೆಯ ಮಟ್ಟ ಉತ್ತಮವಾಗಿದ್ದು ಪ್ರತಿವರ್ಷವೂ ನಮ್ಮ ಶಾಲೆಯಿಂದ 3/4 ಮಕ್ಕಳು ಆದರ್ಶ ಶಾಲೆಗೆ ಆಯ್ಕೆಯಾಗುತ್ತಿದ್ದಾರೆ. ಆದ್ದರಿಂದ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದರು.
ಬಳಿಕ ಸಿಆರ್ಸಿ ಎಎಸ್ ಮಹದೇವ ಮತ್ತು ಮುಖ್ಯ ಶಿಕ್ಷಕ ಜಯರಾಮೇಗೌಡ ಮಾತನಾಡಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಪಾಠಪ್ರವಚನ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ವಿಧ್ಯಾರ್ಥಿವೇತನ, ಇಂಗ್ಲಿಷ್ ಬೋಧನೆ, ಕಲಿಕೆಯ ಬಗ್ಗೆ ನಿರಂತರ ಸಮಾಲೋಚನೆ, ಕಲಿಕಾ ಖಾತ್ರಿ, ಬಿಸಿಯೂಟ, ಪೂರಕ ಪೌಷ್ಟಿಕ ಆಹಾರ, ಪ್ರತಿಭಾ ಪುರಸ್ಕಾರ, ಪ್ರತಿಭಾ ಕಾರಂಜಿ, ಕಲಿಕಾ ಹಬ್ಬ, ಎಕೋ ಕ್ಲಬ್, ಚಿಣ್ಣರ ಕರ್ನಾಟಕ ದರ್ಶನ, ನಾನು ಓದುವೆ, ಗ್ರಂಥಾಲಯ, ಕನ್ನಡ ಭಾಷ ಪ್ರಯೋಗ, ಉಚಿತ ನೋಟ್ ಪುಸ್ತಕ, ಶೂ, ಸಾಕ್ಸ್, ಮತ್ತಿತರ ಸುಮಾರು 30ಕ್ಕೂ ಹೆಚ್ಚಿನ ಸವಲತ್ತುಗಳನ್ನು ಸರ್ಕಾರ ನೀಡುತ್ತಿದ್ದು ಇದನ್ನ ಸದುಪಯೋಗ ಪಡಿಸಿಕೊಂಡು ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನ ಹೆಚ್ಚಿಸಲು ಎಲ್ಲರೂ ಸಹಕಾರ ನೀಡಬೇಕು ಮತ್ತು ಪ್ರತಿಯೊಬ್ಬರೂ ನಿಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಈ ಪ್ರಚಾರಂದೋಲನ ಜಾಥದಲ್ಲಿ ಪುರಸಭೆ ಮಾಜಿ ಸದಸ್ಯ ಸೋಮಶೇಖರ್, ಗುತ್ತಿಗೆದಾರ ವೆಂಕಟೇಶ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಂಗೀತ ಶಿಕ್ಷಕರಾದ ಎ ಎಸ್ ಮಹದೇವ, ದೇವರಾಜ್, ಜಯರಾಮೇಗೌಡ, ಸೀಮಾ, ಮನೋಹರ್, ಮಂಜುನಾಥ್, ಬಸವರಾಜ್ ಆರ್ ಜೆ, ಲೇಪಾಕ್ಷಿ, ಸುಬ್ರಹ್ಮಣ್ಯ, ಆನಂದ್, ನಾಗೇಶ್ ಬಿಎಮ್, ವೆಂಕಟರಮಣ ನಾಯ್ಕ, ಮಹಮ್ಮದ್ ಸುಹಾನ್, ಪ್ರಕಾಶ್, ಸ್ವಾಮಿ, ಚಲ್ಲಿಕಲ್ಕರ್, ಶ್ವೇತಾ, ಸುಮ, ಮೌನೇಶ್ವರಿ, ಜಯಂತಿ ಮತ್ತಿತರರು ಭಾಗವಹಿಸಿದ್ದರು.

