ಉದಯರಶ್ಮಿ ದಿನಪತ್ರಿಕೆ
ಇಂಡಿ: ಸರ್ವರ್ ಕೊರತೆಯಿಂದ ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಪಡಿತರ ಪಡೆಯಲು ಜನರು ಹರಸಾಹಸ ಪಡುತ್ತಿರುವ ಘಟನೆ ನಡೆದಿದೆ.
ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಪಿಕೆಪಿಎಸ್ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುವ ಅಕ್ಕಿ ಪಡೆಯಲು ಜನರು ಸಾಲುಗಳಲ್ಲಿ ಇಡೀ ದಿನ ನಿಂತರೂ ಅಕ್ಕಿ ಪಡೆಯಲು ಆಗುತ್ತಿಲ್ಲ. ಈ ತಿಂಗಳ ೩೧ರೊಳಗೆ ಅಕ್ಕಿ ಪಡೆದುಕೊಳ್ಳದಿದ್ದರೆ ಅಕ್ಕಿ ಕೈತಪ್ಪಿ ಹೋಗುತ್ತದೆ. ಆದರೆ, ಬಿಪಿಲ್ ಕಾರ್ಡುದಾರರು ಹೆಬ್ಬೆಟ್ಟು ಕೊಡಲು ಹೋದಾಗ ಸರ್ವರ್ ಸಮಸ್ಯೆ ಆಗುತ್ತಿದೆ.
ಇದರಿಂದ ಇಡೀ ದಿನ ಸರತಿಯಲ್ಲಿ ನಿಂತರೂ ಅಕ್ಕಿ ಸಿಗದೆ ಜನರು ನಿರಾಸೆಯಿಂದ ಮನೆಗೆ ಮರಳುವಂತಾಗಿದೆ. ‘ಸರ್ವರ್ ಸಮಸ್ಯೆಯಿಂದಾಗಿ ಮೂರು ದಿನಗಳಿಂದ ನಮಗೆ ಪಡಿತರ ಪಡೆಯಲು ಆಗುತ್ತಿಲ್ಲ. ತೋಟದ ಕೆಲಸಕ್ಕೆ ರಜೆ ಮಾಡಿ ರೇಷನ್ ಪಡೆಯಲು ಬರುತ್ತೇವೆ. ಬಿಸಿಲಲ್ಲಿ ಇಡೀದಿನ ಕಾದರೂ ಅಕ್ಕಿ ಸಿಗುತ್ತಿಲ್ಲ’ ಎಂದು ಜನರು ಬೇಸರ ಹೊರಹಾಕಿದ್ದಾರೆ.
ತಡವಲಗಾ ಗ್ರಾಮದಲ್ಲಿ ಸುಮಾರು ೨೪೦೦ ಬಿಪಿಎಲ್ ಕಾರ್ಡ್ ದಾರರು ಹಾಗೂ ೩೦೦ ಎಪಿಎಲ್ ಕಾರ್ಡ್ ದಾರರು ಇದ್ದು.ಇನ್ನು ಸುಮಾರು ಏಳುನೂರು ಕಾರ್ಡುದಾರರಿಗೆ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಆಗುತ್ತಿಲ್ಲ.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಸಮಸ್ಯೆ ಪರಿಹರಿಸಬೇಕು ಇಲ್ಲವಾದರೆ ಅನೇಕ ಕಾರ್ಡುದಾರರು ಪಡಿತರ ಪಡಿದುಕೊಳ್ಳದೆ ವಂಚಿತರಾಗಬಹುದು.
ಹಾಗೂ ಪಡಿತರ ವಿತರಣೆ ಮಾಡುವ ವಿತರಕರು ಪಡಿತರ ಪಡೆದುಕೊಳ್ಳಲು ಬಂದ ಗ್ರಾಹಕರಿಗೆ ತಂಪಾದ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

