ಪ್ರಧಾನಿ ಮೋದಿ ಸರ್ಕಾರಕ್ಕೆ ಈ ಭಾಗದ ಜನರ ಪರವಾಗಿ ಸಂಸದ ರಮೇಶ ಜಿಗಜಿಣಗಿ ಅಭಿನಂದನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಐತಿಹಾಸಿಕ ವಿಜಯಪುರ ಜಿಲ್ಲೆಯ ಜನರ ಬಹುದಿನದ ಬೇಡಿಕೆಯಾಗಿದ್ದ ಬೆಂಗಳೂರು- ಹುಬ್ಬಳ್ಳಿ-ಗದಗ ಬೈಪಾಸ್ ವಿಜಯಪುರ ಮಾರ್ಗವನ್ನು ಶಾಶ್ವತ ಮಾಡುವ ವಿಚಾರಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಜನರ ಬಹುದಿನದ ಬೇಡಿಕೆಯನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಮಂತ್ರಿ ವಿ. ಸೋಮಣ್ಣ ಅವರಿಗೆ ಸತತವಾಗಿ ಪತ್ರ ವ್ಯವಹಾರ ನಡೆಸಲಾಗಿತ್ತಲ್ಲದೇ ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ ಫಲವಾಗಿ ಇದೀಗ ಕೇಂದ್ರ ಸರ್ಕಾರ ಒಲವು ತೋರಿದೆ.
ಈ ಹಿಂದೆ ಕ್ರಿಸ್ ಮಸ್ ಸೇರಿದಂತೆ ಹಲವು ಹಬ್ಬದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಪ್ರಾಯೋಗಿಕ ವಾಗಿ ರೈಲು ಸೇವೆ ಆರಂಭಿಸಲಾಗಿತ್ತು. ಪರಿಣಾಮ ಜನರಿಂದ ವ್ಯಾಪಕವಾಗಿ ಸ್ಪಂದನೆ ವ್ಯಕ್ತವಾಯಿತಲ್ಲದೇ ಆಯಾಭಾಗದ ಸಂಸದರು, ರೈಲ್ವೆ ಮಂತ್ರಿ ಮತ್ತು ಪ್ರಧಾನಿ ಮೋದಿ ಸರ್ಕಾರದ ಕಾರ್ಯವನ್ನು ಕೊಂಡಾಡಿದ್ದರು. ಜನರ ಈ ನಾಡಿಮಿಡಿತ ಅರಿತು ಈ ಮಾರ್ಗವನ್ನು ಶಾಶ್ವತಗೊಳಿಸುವಂತೆ ದುಂಬಾಲು ಬಿದ್ದ ಫಲವಾಗಿ ರೈಲ್ವೆ ಮಂತ್ರಿಗಳು ವಿಶೇಷ ಕಾಳಜಿ ಮತ್ತು ಮುತುವರ್ಜಿ ವಹಿಸಿದ್ದಾರೆ.
ಬಾಗಲಕೋಟೆ–ವಿಜಯಪುರದ ಎಲ್ಲ ರೈಲುಗಳನ್ನು ಈ ಬೈಪಾಸ್ ಮೂಲಕ ಓಡಿಸಿದರೆ, ಪ್ರಯಾಣದ ಸಮಯವನ್ನು 14 ರಿಂದ 10 ಗಂಟೆಗಳಿಗೆ ಇಳಿಸಬಹುದು. ಹೀಗಾಗಿ ಜನದಟ್ಟಣೆಯೂ ತಗ್ಗಲಿದೆ. ಪ್ರಯಾಣಿಕರು ಸಕಾಲಕ್ಕೆ ನಿಗದಿತ ಗಮ್ಯ ತಲುಪಲು ತುಂಬ ಸಹಕಾರಿಯಾಗಲಿದೆ. ಇಂಥ ಮಹತ್ತರ ಬೇಡಿಕೆ ಮನ್ನಿಸುತ್ತಿರುವ ಪ್ರಧಾನಿ ಮೋದಿ ಸರ್ಕಾರಕ್ಕೆ ಈ ಭಾಗದ ಜನರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿರುವ ಸಂಸದ ರಮೇಶ ಜಿಗಜಿಣಗಿ ಅವರು ಶೀಘ್ರದಲ್ಲೇ ರೈಲು ಸೇವೆಗೆ ಹಸಿರು ನಿಶಾನೆ ತೋರುವುದಾಗಿ ತಿಳಿಸಿದ್ದಾರೆ.

