ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ತ್ಯಾಗ, ಬಲಿದಾನ ಸ್ಮರಿಸುವ ಬಕ್ರೀದ್ ಹಬ್ಬವನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ, ಹೊಸ ಉಡುಪುಗಳನ್ನು ಧರಿಸಿ ಆಯಾ ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪಟ್ಟಣದ ಮುಸ್ಲಿಂ ಬ್ಲಾಕ್ ನಲ್ಲಿರುವ ಈದ್ಗಾ ಮೈದಾನದಲ್ಲೂ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಯೂತ್ರುಅಧ್ಯಕ್ಷ ಶಫಿ ಕೋಟೆ ಮಾತನಾಡಿ, ಬಕ್ರೀದ್ ಹಬ್ಬವು ತ್ಯಾಗ ಮತ್ತು ಬಲಿದಾನದ ಪ್ರತೀಕ. ಬಡವರಿಗೆ, ನಿರ್ಗತಿಕರಿಗೆ ದಾನ, ಧರ್ಮ ಮಾಡಲು ಅವಕಾಶ ಮಾಡಿಕೊಡುವುದೇ ಬಕ್ರೀದ್ ಹಬ್ಬದ ವಿಶೇಷತೆ. ಎಲ್ಲರೂ ಕೂಡಿ ಸಹೋದರತೆ, ಸಮಾನತೆ ಹಾಗೂ ಸಹಬಾಳ್ವೆಯಿಂದ ಬದುಕು ನಡೆಸುವ, ಶಾಂತಿ ಸೌಹಾರ್ದತೆಯ ಪ್ರತೀಕವಾಗಿದೆ ಈ ಬಕ್ರೀದ್ ಹಬ್ಬ ಎಂದರು. ಮನುಕುಲಕ್ಕೆ ಶಾಂತಿ ನೀಡಲಿ, ಮಳೆಯಾಗಲಿ, ಬೆಳೆಯಾಗಲಿ. ಶಾಂತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಬೇರೆಯವರ ಬಗ್ಗೆ ಇರುವ ಕೆಡಕನ್ನು ನಾವೆಲ್ಲಾ ತ್ಯಾಗ ಮಾಡಬೇಕಾಗಿದೆ. ಬಕ್ರೀದ್ ಹಬ್ಬವು ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡಲಿ, ಎಲ್ಲರೂ ಕೂಡಿ ಬಾಳುವಂತಾಗಲಿ, ಉತ್ತಮ ಮಳೆ, ಬೆಳೆಯಾಗಿ ದೇಶ ಸಮೃದ್ಧಿಯಾಗಲಿ ಎಂದು ಆಶಿಸಿದರು.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಈದ್ಗಾ ಮೈದಾನದ ಬಳಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

