ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನೋಂದಣಿ ಇಲಾಖೆ ಪೇಪರ್‌ಲೆಸ್ ನೋಂದಣಿ ವ್ಯವಸ್ಥೆ ಜಾರಿಗೆ ತಂದಿರುವದನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬುಧವಾರ ರಾಜ್ಯದಾದ್ಯಂತ ದಸ್ತು ಬರಹಗಾರರ ಚಾರಿಟೇಬಲ್ ಟ್ರಸ್ಟ್ ನಡೆಸಿದ ಮುಷ್ಕರಕ್ಕೆ ಇಲ್ಲಿನ ತಾಲೂಕು ಘಟಕ ಬೆಂಬಲ ಸೂಚಿಸಿತು.
ಬೆಳಿಗ್ಗೆಯಿಂದಲೇ ಸಾಂಕೇತಿಕ ಲೇಕನಿ ಬಂದ್ ಮಾಡಿ ತಾಲೂಕು ಘಟಕದದಿಂದ ಸಭೆ ನಡೆಸಿದರು. ಬಳಿಕ ಸಿ.ಎಂ ಸಿದ್ಧರಾಮಯ್ಯನವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಕೀರ್ತಿ ಚಾಲಕ ಅವರಿಗೆ ನೀಡಿದರು.
ಈ ವೇಳೆ ಟ್ರಸ್ಟ್ ನ ತಾಲೂಕು ಅಧ್ಯಕ್ಷ ಎಚ್.ಆರ್.ಬಾಗವಾನ ಮಾಧ್ಯದವರೊಂದಿಗೆ ಮಾತನಾಡಿ ಸರ್ಕಾರದಿಂದ ಪರವಾನಿಗೆ ಪಡೆದು ದಶಕಗಳಿಂದ ದಸ್ತಾವೇಜು ಬರಹಗಾರರು ಸಾರ್ವಜನಿಕರ ಆಸ್ತಿ ನೋಂದಣಿ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದು, ಇಲಾಖೆಯ ನಿಯಮಾವಳಿಗಳ ಪ್ರಕಾರ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಕಾವೇರಿ ೨.೦ ತಂತ್ರಾಂಶದ ಬಳಿಕ ಇದೀಗ ಕಾವೇರಿ ೩ ಮೂಲಕ “ಪೇಪರ್ ಲೆಸ್ ನೋಂದಣಿ” ವ್ಯವಸ್ಥೆಯನ್ನು ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದರಿಂದ ಸಾರ್ವಜನಿಕರು ಮತ್ತು ದಸ್ತುಬರಹಗಾರರ ನಡುವೆ ಅನೇಕ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ. ಸಾರ್ವಜನಿಕರ ಭೂಮಿ, ಆಸ್ತಿ ಸಂಬಂಧಿತ ದಾಖಲೆಗಳನ್ನು ಈ ಹಿಂದೆ ಕೈಬರಹ, ನಂತರ ಟೈಪಿಂಗ್ ಹಾಗೂ ಗಣಕೀಕರಣದ ಮೂಲಕ ನೋಂದಣಿ ಮಾಡುತ್ತಾ ಬಂದಿದ್ದು, ದಸ್ತಾವೇಜು ಬರಹಗಾರರು ಇಲಾಖೆ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಸರ್ಕಾರಕ್ಕೆ ರಾಜಸ್ವ ಸಂಗ್ರಹವಾಗುವಲ್ಲಿ ನಮ್ಮ ಪಾತ್ರ ಮಹತ್ವದ್ದಾಗಿದೆ. ಹೀಗಿರುವಾಗ ಪೇಪರ್ ಲೆಸ್ ವ್ಯವಸ್ಥೆ ಜಾರಿಯಾದರೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಖರೀದಿಸುವವರಿಗೆ ತಮ್ಮ ಆಸ್ತಿ ಕುರಿತು ಭೌತಿಕ ದಾಖಲೆಗಳು ಕೈಯಲ್ಲಿ ಇರುವುದಿಲ್ಲ. ತಂತ್ರಜ್ಞಾನದಲ್ಲಿ ದೋಷ ಉಂಟಾದರೆ ದಾಖಲೆಗಳ ಭದ್ರತೆ ಬಗ್ಗೆ ಆತಂಕ ಎದುರಾಗಬಹುದು. ಆದ್ದರಿಂದ ಸರ್ಕಾರ ಪೇಪರ್ ಲೆಸ್ ವ್ಯವಸ್ಥೆಯನ್ನು ಹಿಂಪಡೆದು, ದಸ್ತಾವೇಜು ಬರಹಗಾರರಿಗೆ ಪ್ರತ್ಯೇಕ ಲಾಗಿನ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುವದಾಗಿ ತಿಳಿಸಿದರು.
ಈ ವೇಳೆ ಟ್ರಸ್ಟ್ ನ ಜಿಲ್ಲಾ ಸಂಘಟಕ ರಾಜು ಜೋಳದ, ತಾಲೂಕು ಉಪಾಧ್ಯಕ್ಷ ರಾಜು ಪಾವಲೆ, ಪ್ರ.ಕಾರ್ಯದರ್ಶಿ ಡಿ.ಎಚ್.ತೊಗರಿ, ಸದಸ್ಯರಾದ ಎಚ್.ಎಸ್.ನಾಯ್ಕೋಡಿ, ಡಿ.ಎಸ್.ಹಿರೇಮಠ, ಎಸ್.ಬಿ.ಕಡಿ, ಸಲೀಂ ಮುಲ್ಲಾ, ಆರ್.ಎ.ನಾಡಗೌಡ, ಆರ್.ಎಸ್.ಸಂಕಿನ್, ಎಂ.ಎಂ.ಕಟಗಿ ಮತ್ತೀತರರು ಇದ್ದರು.

