ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಸೂಚನೆ ಅನ್ವಯ, ವಿಜಯಪುರ ಜಿಲ್ಲೆಯ ಸಿಂಧಗಿ ವಿಧಾನಸಭಾ ಕ್ಷೇತ್ರ ಮಟ್ಟದ ಶಿಕ್ಷಣ ಸುಧಾರಣಾ ಸಮಿತಿಗೆ ಸಿಂಧಗಿಯ ಶಿಕ್ಷಕರಾದ ಶ್ರೀ ಸಿದ್ಧಲಿಂಗ ಚೌಧರಿ ಅವರನ್ನು ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಇಪಿ 11 ಎಎಲ್‌ಬಿ 2025, ದಿನಾಂಕ: 21.02.2025 ರ ಅನ್ವಯ ಈ ಸಮಿತಿಯನ್ನು ರಚಿಸಲಾಗಿದ್ದು, ತಾಲ್ಲೂಕು ಮಟ್ಟದಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ, ಮಾನವ ಸಂಪನ್ಮೂಲದ ಸಮರ್ಪಕ ಬಳಕೆ ಸೇರಿದಂತೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಸಂಬಂಧಿಸಿದ ಪ್ರಮುಖ ಅಂಶಗಳ ಕುರಿತು ಕಾರ್ಯನಿರ್ವಹಿಸಲು ಒಟ್ಟು 18 ಜನರ ಸಮಿತಿ ರಚಿಸಲಾಗಿದೆ.
ಈ ಸಮಿತಿಗೆ ಸಿಂಧಗಿ ಕ್ಷೇತ್ರದ ಶಾಸಕರಾದ ಅಶೋಕ ಎಮ್ ಮನಗೂಳಿ ಅವರು ಅಧ್ಯಕ್ಷರಾಗಿದ್ದು, ಸರ್ಕಾರಿ ಪ್ರೌಢಶಾಲೆ ಬಂಕಲಗಿಯ ಶಿಕ್ಷಕರಾದ ಸಿದ್ಧಲಿಂಗ ಚೌಧರಿ ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಹಲವು ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಸಿದ್ಧಲಿಂಗ ಚೌಧರಿ ಅವರ ಆಯ್ಕೆಗೆ ಶಿಕ್ಷಕ ವೃಂದ, ಸ್ನೇಹಿತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

