ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರ ರಾಜೀನಾಮೆ ಅಹಿಂದ ವರ್ಗಕ್ಕೆ ಸಾಕಷ್ಟು ನೋವುಂಟುಮಾಡಿದೆ. ಅಹಿಂದ ವರ್ಗಗಳ ಮತ ಪಡೆದ ಶಾಸಕ ಅಶೋಕ ಮನಗೂಳಿ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಸಮಾಜದ ಮುಖಂಡ ಮಲ್ಲಿಕಾರ್ಜುನ ಸಾವಳಸಂಗ ಆಗ್ರಹಿಸಿದ್ದಾರೆ.
ಸಿಂದಗಿ ನಗರದ ಬಸವೇಶ್ವರ ವೃತ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಲು ಒತ್ತಡ ಹಾಕಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗುರುವಾರ ಕುರುಬ ಸಂಘ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಹಾಗೂ ಅವರ ಅಹಿಂದ ಬೆಂಬಲವೇ ಕಾರಣ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಎದುರಿಸಬೇಕಾಗುತ್ತದೆ. ರಾಜ್ಯಕ್ಕೆ ಗ್ಯಾರಂಟಿ ನೀಡಿ, ಅದನ್ನು ವ್ಯವಸ್ಥಿತವಾಗಿ ನಿಭಾಯಿಸಿರುವ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಉದ್ದೇಶ ಏನು? ೨೦೨೮ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿದ್ದಾರೆ ಎನ್ನುವ ಕಾರಣಕ್ಕೆ ಅಹಿಂದ ಸಮಾಜವು ಶೇ.೯೦ರಷ್ಟು ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರ ಮುಂಬರುವ ೨೦೨೮ರ ಚುನಾವಣೆಯಲ್ಲಿ ಅಹಿಂದ ಒಕ್ಕೂಟ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಈ ವೇಳೆ ತಳವಾರ ಸಮಾಜದ ಮುಖಂಡ ಪೀರು ಕೆರೂರ ಮಾತನಾಡಿದರು.
ಸುಡುವ ಬಿಸಿಲಿನಲ್ಲಿ ಜಮಾಯಿಸಿದ್ದ ಸಿಂದಗಿ ಮತ್ತು ಆಲಮೇಲ ಕುರುಬ ಸಂಘದ ಜನರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಮೊಳಗಿಸಿ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಕುರುಬ ಸಂಘದ ತಾಲೂಕಾಧ್ಯಕ್ಷ ನಿಂಗಣ್ಣ ಬುಳ್ಳಾ, ಆಲಮೆಲ ತಾಲೂಕು ಕುರುಬ ಸಂಘದ ಅಧ್ಯಕ್ಷ ಸಿದ್ದು ಕರಿಗೊಂಡ, ಪೀರು ಕೆರೂರ, ಶಿವಾನಂದ ಗಣಿಹಾರ, ದತ್ತು ಎಡಗಿ, ಯಲ್ಲು ಬಮನಳ್ಳಿ, ಭೀಮರಾಯ ಸೀತಿಮನಿ, ಮಾಳು ಗಡೆದ, ಲಕ್ಷ್ಮಣ್ಣ ಜೇವರ್ಗಿ, ಬಾಪುಗೌಡ ಪಾಟೀಲ, ಸಿದ್ದು ತಮದೊಡ್ಡಿ, ನಿಂಗಣ್ಣ ಬಿಸಾನಾಳ, ವಿಠ್ಠಲ ನಾಯ್ಕೋಡಿ, ಮಡಿವಾಳಪ್ಪ ಪೂಜಾರಿ, ಬಸನಗೌಡ ಪಾಟೀಲ ಸೇರಿದಂತೆ ಸಿದ್ದರಾಮಯ್ಯನ ಅವರ ಅಭಿಮಾನಿಗಳು ಇದ್ದರು.

