ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ೨೦೨೬ನೇ ಮೇ ಹಾಗೂ ಜೂನ್ ತಿಂಗಳಿಗೆ ಸಂಬಂಧಿಸಿದ ಪಡಿತರ ಅಕ್ಕಿಯನ್ನು ಮೇ ತಿಂಗಳಿನಲ್ಲಿಯೇ ವಿತರಿಸಲು ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ಅಂತ್ಯೋದಯ ಅನ್ನಯೋಜನೆ ಪ್ರತಿ ಪಡಿತರ ಚೀಟಿಗೆ ಎರಡೂ ತಿಂಗಳ ಪಡಿತರ ಅಕ್ಕಿ ಒಟ್ಟು ೭೦ ಕೆಜಿ ಹಾಗೂ ಆಧ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿ ತಿಂಗಳು ಪ್ರತಿ ಸದಸ್ಯರಿಗೆ ೫ ಕೆಜಿಯಂತೆ ಒಟ್ಟು ೧೦ ಕೆಜಿ ಅಕ್ಕಿಯನ್ನು ಕಡ್ಡಾಯವಾಗಿ ಎರಡು ಪ್ರತ್ಯೇಕ ಬಯೋಮೆಟ್ರಿಕ್ ನೀಡುವ ಮೂಲಕ ಪಡಿತರ ಚೀಟಿದಾರರು ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಮೇ ಹಾಗೂ ಜೂನ್ ತಿಂಗಳ ಅಕ್ಕಿಯನ್ನು ೨೦೨೬ನೇ ಜೂನ್ ತಿಂಗಳಲ್ಲಿ ವಿತರಣೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಸರ್ಕಾರವು ನೀಡುತ್ತಿರುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಿಕೊಳ್ಳದಿರಲು ಸೂಚಿಸಿದೆ. ಒಂದು ವೇಳೆ ಮಾರಾಟ ಮಾಡುವುದು ಕಂಡುಬಂದರೆ ಅಂತಹ ಬಿಪಿಎಲ್ ಕಾರ್ಡುಗಳನ್ನು ರದ್ದು ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

