ಹೆಚ್ ಡಿ ಕೋಟೆ ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಚಾಕಹಳ್ಳಿ ಕೃಷ್ಣ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಥಳೀಯ ನಾಯಕರಿಗೆ ಮೊದಲ ಆದ್ಯತೆ ನೀಡಬೇಕೆಂದು, ಅದರಲ್ಲೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಾಯಕರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕೆಂದು ಮೊನ್ನೆ ನಡೆದ ನಾಯಕ ಸಮುದಾಯದ ಸಭೆಯಲ್ಲಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ ಎಂದು ತಾಲೂಕು ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಚಾಕಹಳ್ಳಿ ಕೃಷ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು, ನಮ್ಮ ಸಮುದಾಯದ ಹಿರಿಯ ನಾಯಕರು. ಶಾಸಕರಾಗಿ ತಾಲೂಕಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಎಸ್ಟಿ ಪ್ರಮಾಣಪತ್ರ ಗೊಂದಲ ಸರಿಪಡಿಸಲು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ದೊಡ್ಡನಾಯಕ, ದಿವಂಗತ ಚಿಕ್ಕಮಾದು, ಅಪ್ಪಣ್ಣ, ಸಿದ್ದರಾಜು, ಬಸವರಾಜು, ರಾಮಚಂದ್ರ ಸೇರಿದಂತೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಸ್ಟಿ ಸಮುದಾಯದ ನಾಯಕರು ಹೋರಾಟ ನಡೆಸಿದ್ದಾರೆ. ಹೆಚ್ ಡಿ ಕೋಟೆ ಹಾಗು ಸರಗೂರು ತಾಲೂಕಿನಲ್ಲಿ ಸ್ಥಳೀಯ ಮಟ್ಟದಲ್ಲಿ ಏನೇ ಸಮಸ್ಯೆಗಳು ಎದುರಾದರೂ ಅವುಗಳನ್ನು ಬಗೆಹರಿಸುವುದು ಸ್ಥಳೀಯ ನಾಯಕರಾಗಿರುವ ಬೀಚನಹಳ್ಳಿ ಚಿಕ್ಕಣ್ಣ ಅವರೇ ಹೊರತು ಹೊರಗಿನ ಜಿಲ್ಲೆಯವರಲ್ಲ. ಹೀಗಾಗಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡುತ್ತೇವೆ ಎಂದು
ಚಾಕಹಳ್ಳಿ ಕೃಷ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಯಾರ ನಾಗನಾಯಕ, ಆಶ್ರಯ ಸಮಿತಿಯ ಸದಸ್ಯ ಕೋಟೆ ಕೃಷ್ಣ, ಮುಖಂಡರಾದ ನಿಂಗನಾಯಕ, ಮೆಕ್ಯಾನಿಕ್ ಸೂರಿ, ರಘು, ಇದ್ದರು.
“ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು ಜೆಡಿಎಸ್ ಪಕ್ಷ ಬಿಟ್ಟು ಎಲ್ಲೂ ಹೋಗಿಲ್ಲ. ಈಗಲೂ ಪಕ್ಷದಲ್ಲಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಜನರೊಂದಿಗೆ ಜನತಾದಳ ಸಮಾವೇಶ ಸೇರಿದಂತೆ ಪಕ್ಷದ ಅಡಿಯಲ್ಲಿ ನಡೆದ ಕೆಲ ಕಾರ್ಯಕ್ರಮಗಳಿಗೆ ಸ್ಥಳೀಯ ಮುಖಂಡರು ಆಹ್ವಾನ ನೀಡದ ಹಿನ್ನೆಲೆ ಬೀಚನಹಳ್ಳಿ ಚಿಕ್ಕಣ್ಣ ಅವರು ಭಾಗವಹಿಸಿರಲಿಲ್ಲ. ಅಂದ ಮಾತ್ರಕ್ಕೆ ಜೆಡಿಎಸ್ ನಿಂದ ಚಿಕ್ಕಣ್ಣ ದೂರವಾಗಿದ್ದಾರೆ ಅನ್ನೋದು ಶುದ್ಧ ಸುಳ್ಳು.”
– ಚಾಕಹಳ್ಳಿ ಕೃಷ್ಣ
ಜೆಡಿಎಸ್ ಮುಖಂಡರು

