ವಿಷ ಸೇವಿಸಲೆತ್ನಿಸಿದ ಜಮೀನಿನ ಮಾಲೀಕನ ಆರೋಗ್ಯ ಸ್ಥಿರ | ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಟವರ್ ನಿರ್ಮಾಣ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಜಮೀನಿಗೆ ತೆರಳಿದಾಗ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ವಿಷ ಪದಾರ್ಥ ಸೇವಿಸಲು ಯತ್ನಿಸಿದ ಜಮೀನಿನ ಮಾಲೀಕನಿಗೆ ಸೂಕ್ತ ಚಿಕಿತ್ಸೆ ಹಾಗೂ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಇಂಧನ ಇಲಾಖೆಯ ವ್ಯಾಪ್ತಿಯ ಕೇಂದ್ರೀಯ ವಿದುಚ್ಛಕ್ತಿ ಪ್ರಾಧಿಕಾರದಡಿ ಬರುವ ನರೇಂದ್ರ ಹೊಸ ಸ್ವೀಕರಣಾ (ಕೂಡಗಿ) ಕೇಂದ್ರದಿಂದ ಪುಣೆ (ಜಿ.ಐ.ಎಸ್) ಸ್ಟಿಕರಣಾ ಕೇಂದ್ರದವರೆಗೆ ೭೬೫ ಕೆ.ವಿ. ಪ್ರಸರಣ ಮಾರ್ಗ ನಿರ್ಮಿಸುವ ಕಾಮಗಾರಿಗೆ ನಡೆದಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಬಸವನ ಬಾಗೇವಾಡಿ, ಬಬಲೇಶ್ವರ, ತಿಕೋಟಾ ಹಾಗೂ ಕೋಲಾರ ತಾಲೂಕುಗಳಲ್ಲಿ ಟವರ್ ನಿರ್ಮಾಣ ಹಾಗೂ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿಗಳು ನಡೆಯುತ್ತಿವೆ. ಒಟ್ಟು ೧೭೭ ಸ್ಥಳಗಳಲ್ಲಿ ಟವರ್ ನಿರ್ಮಾಣದ ಅಡಿಪಾಯ ಕಾಮಗಾರಿಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ೧೬೮ ಸ್ಥಳಗಳಲ್ಲಿ ಟವರ್ ನಿರ್ಮಾಣದ ಅಡಿಪಾಯ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿವೆ. ಉಳಿದ ಸ್ಥಳಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕೊಲ್ಲಾರ ತಾಲೂಕಿನ ತಳೇವಾಡ ಗ್ರಾಮದಲ್ಲಿ ಸ.ನಂ. ೧೬೧/೨ ರಲ್ಲಿ ಮಲ್ಲನಗೌಡ ಹಣಮಂತಗೌಡ ಬಿರಾದಾರ ಅವರ ಜಮೀನಿನಲ್ಲಿ ಸುಮಾರು ಎರಡೂವರೆ ಗುಂಟೆಯಲ್ಲಿ ಟವರ್ ಕಾರಿಡಾರ್ ನಿರ್ಮಾಣಕ್ಕಾಗಿ ನಿಯಮಾನುಸಾರ ೮,೯೬,೨೩೬.೦೦ ಪರಿಹಾರ ಧನ ನಿಗದಿಪಡಿಸಲಾಗಿತ್ತು. ಟವರ್ ನಿರ್ಮಾಣ ಅಡಿಪಾಯ ಕಾಮಗಾರಿಯೂ ಮುಗಿದಿತ್ತು.
ಹೀಗಾಗಿ ಬುಧವಾರ ಮಧ್ಯಾಹ್ನ ೧ ಗಂಟೆಗೆ ಟವರ್ ನಿರ್ಮಾಣದ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಜಮೀನಿಗೆ ತೆರಳಿದ್ದರು. ಈ ವೇಳೆ ಜಮೀನಿನ ಮಾಲೀಕ ಅಧಿಕಾರಿಗಳೊಂದಿಗೆ ಸಹಕರಿಸುವ ಬದಲಿಗೆ ಅವರ ಸಮ್ಮುಖದಲ್ಲಿ ವಿಷ ಪದಾರ್ಥ ಸೇವನೆಗೆ ಯತ್ನಿಸಿದ್ದರು. ಅವರುಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಹಾಗೂ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.

