ವೇತನ ಬಿಡುಗಡೆಗೆ ಆಗ್ರಹಿಸಿ ನೌಕರರ ಸಂಘದಿಂದ ಬಿಇಓ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಂಡ ವಿಜಯಪುರ ಗ್ರಾಮೀಣ ಶೈಕ್ಷಣಿಕ ತಾಲ್ಲೂಕಿನಲ್ಲಿ ಎಸ್ಎಸ್ಎ ಯೋಜನೆಯಡಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಮಾರ್ಚ್ ಹಾಗೂ ಏಪ್ರೀಲ್ ತಿಂಗಳ ವೇತನ ಆಗದೇ ಇರುವದರಿಂದ ಸಂಕಷ್ಟ ಅನುಭವಿಸುತ್ತಿದ್ದು, ತಿಕೋಟಾ ತಾಲ್ಲೂಕ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ ಅವರ ತಂಡದಿಂದ ವೇತನ ಬಿಡುಗಡೆಗೆ ಆಗ್ರಹಿಸಿ ಬಿಇಓ ಬಸವರಾಜ ತಳವಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಮಠಪತಿ ಎರಡು ತಿಂಗಳಿನಿಂದ ವೇತನ ಇಲ್ಲದೇ ಶಿಕ್ಷಕರು ಪರದಾಡುವಂತಾಗಿದೆ. ಮಕ್ಕಳ ಶಾಲಾ ಶುಲ್ಕ, ಮನೆ ಬಾಡಿಗೆ, ಸಾಲದ ಕಂತುಗಳು, ಸಂಸಾರಿಕ ಖರ್ಚು ನಿಭಾಯಿಸಲಿಕ್ಕೆ ಆಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಯಾವುದೇ ತಾಂತ್ರಿಕ ಸಮಸ್ಯೆ ಅಥವಾ ಬಜೆಟ್ ಸಮಸ್ಯೇ ಏನೇ ಇದ್ದರು ಈ ವಾರದೊಳಗೆ ವೇತನ ಪಾವತಿ ಮಾಡಬೇಕು. ಇಲ್ಲದಿದ್ದರೆ ಕಛೇರಿ ಮುಂದೆ ನೌಕರರ ಸಂಘದ ವತಿಯಿಂದ ವೇತನಕ್ಕಾಗಿ ಪ್ರತಿಭಟನೆಗೆ ಧರಣಿ ಕೂಡಲಾಗುವುದು ಎಂದು ಹೇಳಿದರು.
ಜಿಲ್ಲಾ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ನೀಜು ಮೇಲಿನಕೇರಿ ಮಾತನಾಡಿ ಎಸ್ಎಸ್ಎ ಶಿಕ್ಷಕರು ರಜೆಯಲ್ಲಿ ಕುಟುಂಬ ಸದಸ್ಯರೊಂದಿಗೆ ನೆಮ್ಮದಿಯಿಂದ ಇರಲು ಆಗುತ್ತಿಲ್ಲ. ಏನೇ ಸಮಸ್ಯೆ ಇದ್ದರೂ ಬೇಗನೆ ಇತ್ಯರ್ಥ ಮಾಡಿ ವೇತನ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜಗದೀಶ ಬೋಳಸೂರ, ಎಂ.ಆರ್. ಮರ್ತೂರ, ಇಮಾಮ್ ಸಾದಿಕ್ ನಿಂಬಾಳಕರ ಇದ್ದರು.

