ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಗ್ರಾಮೀಣ ಬಡಜನರಿಗೆ ಉದ್ಯೋಗ ಭದ್ರತೆ ಒದಗಿಸುವ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎಂದು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಿಕೋಟಾ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಉದ್ಯೋಗ ಮಾಡಿದ ಕೂಲಿಕಾರರ ವೇತನ ಪಾವತಿಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು, ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಪಾಡಬೇಕು. ಎಂಐಎಸ್‌ನಲ್ಲಿ ಸಮಯಕ್ಕೆ ಸರಿಯಾಗಿ ಮಾಹಿತಿ ದಾಖಲಿಸಬೇಕು ಎಂದು ಸೂಚಿಸಿದರು.
ಮನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿವಾರು ಗುರಿ ನಿಗದಿಪಡಿಸಿರುವ ಮಾನವ ದಿನಗಳ ಸೃಜನೆ ಮಾಡಿ ಗುರಿ ಸಾಧಿಸಲು ಎಲ್ಲರೂ ಕ್ರಮ ವಹಿಸಬೇಕು. ನರೇಗಾ ಕೆಲಸದ ಬೇಡಿಕೆ ಸಲ್ಲಿಸಿದ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಕಾಲಮಿತಿಯೊಳಗೆ ಉದ್ಯೋಗ ಒದಗಿಸಬೇಕು, ಕಾಮಗಾರಿಗಳನ್ನು ನಿಗದಿತ ಸಮಯದೊಳಗಾಗಿ ಪೂರ್ಣಗೊಳಿಸುವತ್ತ ವಿಶೇಷ ಗಮನ ಹರಿಸಬೇಕು
ಈಗಾಗಲೇ ಅನುಮೋದನೆಗೊಂಡ ಪ್ರಗತಿ ಹಂತದ ಕೂಲಿ ಆಧಾರಿತ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಡಿ ಪ್ರತಿ ಗ್ರಾ.ಪಂ.ಗಳಲ್ಲಿ ಎನ್.ಎಂ.ಆರ್. ಜನರೇಟ್ ಮಾಡಿ ಗ್ರಾಮೀಣ ಕೂಲಿಕಾರರಿಗೆ ಉದ್ಯೋಗ ಒದಗಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ಜನರು ನರೇಗಾ ಯೋಜನೆಯ ಮೇಲೆ ಅವಲಂಬಿತರಾಗಿದ್ದಾರೆ ಎನ್ನುವದನ್ನು ಗುರುತಿಸಿ ಅಂತಹ ಕುಟುಂಬಗಳಿಗೆ ಉದ್ಯೋಗ ಒದಗಿಸಿ ನಿಗದಿತ ಗುರಿ ಸಾಧಿಸಲು ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕಿನ ಎಲ್ಲಾ ೧೪ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಿ ಕೂಲಿಕಾರರ ಫೇಸ್ ಅಥೆಂಟಿಕೇಷನ್ ಅನ್ನು ಎರಡು ದಿನಗಳಲ್ಲಿ ಕಡ್ಡಾಯವಾಗಿ ಶೇ ೧೦೦ರಷ್ಟು ಆರಂಭಿಸಬೇಕು. ಉದ್ಯೋಗ ಒದಗಿಸಿರುವ ಎಲ್ಲಾ ಕೂಲಿಕಾರರಿಗೆ ನಿಗದಿತ ಸಮಯದಲ್ಲಿ ಕೂಲಿ ಪಾವತಿಸಲು ಕ್ರಮ ಕೈಗೊಳ್ಳಬೇಕು. ಇಲ್ಲಿಯವರೆಗಿನ ಪ್ರಗತಿ ಹಂತದಲ್ಲಿರುವ ಎಲ್ಲ ಕಾಮಗಾರಿಗಳನ್ನು ಕೂಡಲೇ ಶೇ ೧೦೦ ರಷ್ಟು ಪೂರ್ಣಗೊಳಿಸಬೇಕು ಎಂದರು.
ಸಭೆಯಲ್ಲಿ ಸಹಾಯಕ ನಿರ್ದೇಶಕರಾದ ಬಸವರಾಜ ಸಂಕಗೊಂಡ, ತಾಂತ್ರಿಕ ಸಂಯೋಜಕ ನಾಗರಾಜ ಕಲಕೇರಿ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಲೂಕು ಎಮ್.ಐ.ಎಸ್ ಸಂಯೋಜಕಿ ಅಪರ್ಣಾ ಬದಾಮಿ ಸೇರಿದಂತೆ ಇತರರು ಹಾಜರಿದ್ದರು.

