ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹವಾಮಾನ ಬದಲಾವಣೆ ತಡೆಗಟ್ಟುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ, ಕೆಪಿಐಗಳ ಅನುಷ್ಠಾನಕ್ಕೆ ಜಿಲ್ಲಾ ಪಂಚಾಯತಿನಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಸಿ.ಬಿ. ಕುಂಬಾರ ಹೇಳಿದರು.
ಎಂಪ್ರಿ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕುರಿತು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರಿಯಾ ಯೋಜನೆ (ಏSಂPಅಅ) ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿಗಳಾದ ಡಾ. ಪವಿತ್ರಾ ಪಿ. ನಾಯಕ್ ಅವರು ಮಾತನಾಡಿ, ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.ಹವಾಮಾನ ಕಾರ್ಯನೀತಿ, ಕಾರ್ಯತಂತ್ರಗಳು, ವಿವಿಧ ಇಲಾಖೆಗಳ ಪಾತ್ರ ಹಾಗೂ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳು ಮತ್ತು ಜಿಲ್ಲಾಸ್ಥರದ ದತ್ತಾಂಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ಶಿವರುದ್ರಪ್ಪ ಕಬಾಡಗಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಇಲಾಖೆಯು ತೆಗೆದುಕೊಂಡ ಕ್ರಮಗಳ ಕುರಿತು ವಿವರಿಸಿದರು.
ಜಲ ಸಂಪನ್ಮೂಲ ವಲಯಕ್ಕೆ ಸಂಬಂಧಿಸಿದ ಹವಾಮಾನ ಕ್ರಿಯಾ ಯೋಜನೆ ಕುರಿತು ಜಲ ಸಂಪನ್ಮೂಲ ತಜ್ಞರಾದ ಡಾ. ಶಶಿಕುಮಾರ್ ಎನ್. ಸಂಕ್ಷಿಪ್ತ ಮಾಹಿತಿ ನೀಡಿದರು.
ಸಭೆಯಲ್ಲಿ ಎನ್.ಆರ್.ಡಿ.ಎಂ.ಎಸ್ ಅಧಿಕಾರಿಗಳಾದ ಚನ್ನಮ್ಮ ಕರೆಪ್ಪ, ಎಂಪ್ರಿ ಸಂಸ್ಥೆಯ, ಕುಮಾರಿ ರುಚಿತಾ ಶ್ರೀ ತರಬೇತಿ ಅಸೋಸೊಯೇಟ್ ಹಾಗೂ ತರಬೇತಿ ಸಹಾಯಕರಾದ ರಾಘವೇಂದ್ರ ಎನ್. ಸೇರಿದಂತೆ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸುಮಾರು ೫೫ ಮಂದಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರು ಹಾಗೂ ಇತರೆ ಪಾಲುದಾರರು ಭಾಗವಹಿಸಿದ್ದರು.

