ದಿನದಿಂದ ದಿನಕ್ಕೆ ಏರುತ್ತಲೇ ಇರುವ ಸೂರ್ಯನ ತಾಪಮಾನ | ಕಸುಬು ನಂಬಿದ ಕುಟುಂಬಗಳ ಮೊಗದಲ್ಲಿ ಮಂದಹಾಸ
ಉದಯರಶ್ಮಿ ದಿನಪತ್ರಿಕೆ
ವರದಿ: ರತ್ನಾಂಜಲಿ ವಾಲಿಕಾರ
ವಿಜಯಪುರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೂರ್ಯನ ತಾಪಮಾನ ಏರುತ್ತಲೇ ಇದೆ. ಬಿರು ಬೇಸಿಗೆಯ ದಾಹ ನೀಗಿಸಿಕೊಳ್ಳಲು ಸಾರ್ವಜನಿಕರು ಈಗ ನೈಸರ್ಗಿಕವಾದ ‘ಮಣ್ಣಿನ ಮಡಿಕೆ’ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮಣ್ಣಿನ ಮಡಿಕೆಗಳ ವ್ಯಾಪಾರ ವಹಿವಾಟು ಜೋರಾಗಿದ್ದು, ಈ ಕಸುಬು ನಂಬಿದ ಕುಟುಂಬಗಳ ಮೊಗದಲ್ಲಿ ಮಂದಹಾಸ ಮೂಡಿದೆ.
ಆರೋಗ್ಯಕ್ಕೆ ಮಡಿಕೆ ನೀರು ಅಮೃತ. ಮಣ್ಣಿನ ಮಡಿಕೆಯಲ್ಲಿನ ಸಣ್ಣ ರಂಧ್ರಗಳ ಮೂಲಕ ನೀರು ನಿಧಾನವಾಗಿ ಆವಿಯಾಗುವುದರಿಂದ ನೀರು ಸ್ವಾಭಾವಿಕವಾಗಿ ತಂಪಾಗುತ್ತದೆ. ಇದು ದೇಹಕ್ಕೆ ಸಮತೋಲಿತ ತಂಪನ್ನು ನೀಡುತ್ತದೆ. ಈ ನೈಸರ್ಗಿಕ ಗುಣವೇ ಜನರನ್ನು ಮಡಿಕೆಯತ್ತ ಆಕರ್ಷಿಸುತ್ತಿದೆ.
ಕುಲಕಸುಬಿಗೆ ಆರ್ಥಿಕ ಬಲ: ಮಣ್ಣಿನ ಮಡಿಕೆಗಳ ಬೇಡಿಕೆ ಕುಸಿದು ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ಈ ಬೇಸಿಗೆ ವರದಾನವಾಗಿದೆ. ಕೆಲವು ಕಡೆಗಳಲ್ಲಿ ದಿನಕ್ಕೆ ನೂರಾರು ಮಡಿಕೆಗಳು ಮಾರಾಟವಾಗುತ್ತಿದ್ದು, ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗೆ ಹೊಸ ಚೈತನ್ಯ ಬಂದಿದೆ.
ಪರಿಸರ ಸ್ನೇಹಿ ಆಯ್ಕೆ: ಮಣ್ಣಿನ ಮಡಿಕೆಗಳು ನೈಸರ್ಗಿಕ ವಸ್ತುಗಳಿಂದ ತಯಾರಾಗುವುದರಿಂದ ಇವುಗಳಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ. ಪ ಜಿಲ್ಲಾಡಳಿತವು ವಾಹನ ಸವಾರರಿಗಾಗಿ ನಗರದ ವಿವಿಧ ವೃತ್ತಗಳಲ್ಲಿ ನೆರಳಿನ ಹೊದಿಕೆ ನಿರ್ಮಿಸಿರುವುದು ಶ್ಲಾಘನೀಯವಾಗಿದ್ದು, ಜನರು ತಂಪು ನೀರಿಗಾಗಿ ಮಡಿಕೆಯನ್ನು ಆರಿಸಿಕೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.
“ಬೇಸಿಗೆ ಪ್ರಾರಂಭವಾದರೆ ಮಾತ್ರ ಮಣ್ಣಿನ ಮಡಿಕೆಗಳಿಗೆ ಭರ್ಜರಿ ಬೇಡಿಕೆ ಬರುತ್ತದೆ. ಉಳಿದ ದಿನಗಳಲ್ಲಿ ಮಾರಾಟ ಸಾಧಾರಣವಾಗಿರುತ್ತದೆ. ಈಗ ಬಿಸಿಲಿನ ಜಳ ಹೆಚ್ಚುತ್ತಿರುವುದರಿಂದ ಜನರು ಮುಗಿಬಿದ್ದು ಮಡಿಕೆಗಳನ್ನು ಖರೀದಿಸುತ್ತಿದ್ದಾರೆ. ಇದರಿಂದ ನಮ್ಮ ಜೀವನೋಪಾಯಕ್ಕೆ ಸ್ವಲ್ಪ ಆಸರೆಯಾಗಿದೆ.”
– ಮಹೇಶ ಕುಂಬಾರ ಸ್ಥಳೀಯ ಮಡಿಕೆ ಮಾರಾಟಗಾರ.

ಹಳೆಯ ಸಂಪ್ರದಾಯಕ್ಕೆ ಮರುಜೀವ
ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಮಣ್ಣಿನ ಮಡಿಕೆಗಳ ಬಳಕೆ ಕಡ್ಡಾಯವಾಗಿತ್ತು. ಮಣ್ಣಿನ ಪಾತ್ರೆಯ ನೀರು ಆರೋಗ್ಯಕ್ಕೆ ಹಿತಕಾರಿ ಎಂಬ ಅರಿವು ಅಂದಿನವರಿಗಿತ್ತು. ಆಧುನಿಕ ಜೀವನಶೈಲಿಯಿಂದಾಗಿ ನಡುವೆ ಮರೆಯಾಗಿದ್ದ ಈ ಸಂಪ್ರದಾಯ, ಈಗ ಮತ್ತೆ ಜೀವ ಪಡೆದಿದೆ. ರಸ್ತೆ ಬದಿಗಳಲ್ಲಿ, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮಣ್ಣಿನ ಮಡಿಕೆಗಳ ಮಾರಾಟದ ಸದ್ದು ಕೇಳಿಬರುತ್ತಿದೆ. ಕೇವಲ ಮನೆಗಳಿಗಷ್ಟೇ ಅಲ್ಲದೆ, ಕಚೇರಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲೂ ಜನರು ಮಡಿಕೆಗಳನ್ನು ಇರಿಸುತ್ತಿದ್ದಾರೆ.

