ವಾಣಿಜ್ಯ ಗ್ಯಾಸ್ ಸಿಲಿಂಡರ್ & ಆಟೋ ಎಲ್‌ಪಿಜಿ ದರ ಏರಿಕೆ | ಬಡ ಜನರ ಮೇಲೆ ಕೇಂದ್ರ ಸರ್ಕಾರ ಚಾಟಿ ಏಟು | ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್ ಹಾಗೂ ಆಟೋ ಎಲ್‌ಪಿಜಿ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕ್ರಮವನ್ನು ಆಮ್ ಆದ್ಮಿ ಪಾರ್ಟಿ ವಿಜಯಪುರ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ “ಈ ಅನ್ಯಾಯಕರ ದರ ಏರಿಕೆ ಪಂಚ್ ರಾಜ್ಯಗಳ ಚುನಾವಣೆ ಮುಗಿದ ಮರುದಿನವೇ ಕೇಂದ್ರ ಸರ್ಕಾರ ಬಡ ಜನರ ಮೇಲೆ ಚಾಟಿ ಏಟು ಬೀಸಿದೆ. ಸಾಮಾನ್ಯ ಜನರ ಬದುಕಿನ ಮೇಲೆ ಭಾರೀ ಹೊರೆ ಹಾಕಿದ್ದು, ಸಣ್ಣ ವ್ಯಾಪಾರಿಗಳು, ಹೋಟೆಲ್ ಉದ್ಯಮಿಗಳು ಹಾಗೂ ಆಟೋ ಚಾಲಕರನ್ನು ಸಂಕಷ್ಟದ ಅಂಚಿಗೆ ತಳ್ಳಿದೆ” ಎಂದು ಹೇಳಿದರು.
“ಈಗಾಗಲೇ ದುಬಾರಿ ಬದುಕಿನ ಹೊರೆ ಹೊತ್ತಿರುವ ಜನರಿಗೆ ಈ ದರ ಏರಿಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಆಟೋ ಚಾಲಕರು ದಿನನಿತ್ಯದ ಆದಾಯದಿಂದಲೇ ಜೀವನ ಸಾಗಿಸುವ ಪರಿಸ್ಥಿತಿಯಲ್ಲಿ ಇಂತಹ ದರ ಏರಿಕೆ ಅವರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ” ಎಂದು ಭೋಗೇಶ್ ಸೋಲಾಪುರ್ ಆಕ್ರೋಶ ವ್ಯಕ್ತಪಡಿಸಿದರು.
“ಹೋಟೆಲ್ ಮತ್ತು ಸಣ್ಣ ಉದ್ಯಮಗಳು ನಷ್ಟದ ದಾರಿಯಲ್ಲಿ ಸಾಗುತ್ತಿದ್ದು, ಉದ್ಯೋಗ ಕಳೆದುಕೊಳ್ಳುವ ಭೀತಿ ಹೆಚ್ಚುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಾರ್ಟಿ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಸಂಜು ಶೆಟಗಾರ, ಯುವ ಮುಖಂಡರಾದ ಪ್ರಕಾಶ್ ಸಬರದ, ಕಿರಣ್ ಮೇಲಿನಕೇರಿ, ಮಹಿಳಾ ಮುಖಂಡರಾದ ಸುಶೀಲಾ ಮಿಣಜಗಿ, ಜ್ಯೋತಿ ಮಿಣಜಗಿ ಉಪಸ್ಥಿತರಿದ್ದರು.
ಆಮ್ ಆದ್ಮಿ ಪಕ್ಷದ ಮುಖ್ಯ ಬೇಡಿಕೆಗಳು
- ವಾಣಿಜ್ಯ ಗ್ಯಾಸ್ ಸಿಲಿಂಡರ್ ದರವನ್ನು ತಕ್ಷಣ ಕಡಿಮೆ ಮಾಡಬೇಕು.
- ಆಟೋ ಎಲ್‌ಪಿಜಿ ದರವನ್ನು ಹಿಂಪಡೆಯಬೇಕು.
- ಸಣ್ಣ ವ್ಯಾಪಾರಿಗಳು ಮತ್ತು ಆಟೋ ಚಾಲಕರಿಗೆ ವಿಶೇಷ ಸಬ್ಸಿಡಿ ನೀಡಬೇಕು.
- ಇಂಧನ ದರ ನಿಯಂತ್ರಣಕ್ಕೆ ಸ್ಪಷ್ಟ ನೀತಿ ಜಾರಿಗೊಳಿಸಬೇಕು.

