ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಜಮಖಂಡಿಯಲ್ಲಿ ಉದ್ಯೋಗ ಭರವಸಾ ಕೋಶ, ಐಕ್ಯೂಎಸಿ. ಮ್ಯಾಗ್ನೆಸ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಹಾಗೂ ಪೋರ್ಟಲ್ ಹೆಚ್.ಆರ್. ಕನ್ಸಲನ್ಸಿ ಸರ್ವಿಸಸ್ ಇವರ ಸಹಯೋಗದೊಂದಿಗೆ “ಕ್ಯಾಂಪಸ್ ಸಂದರ್ಶನ” ಅನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮ್ಯಾಗ್ನೆಸ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಹೆಚ್.ಆರ್. ಸುಹಾಸ ಜೆ. ಇವರು ಮಾತನಾಡುತ್ತಾ, ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿ, ಸಂದರ್ಶನದಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲ್ಯಗಳು, ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಾಸದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸುನಂದಾ ಎಸ್. ಶಿರೂರ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇಂತಹ ಕ್ಯಾಂಪಸ್ ಸಂದರ್ಶನ (ಡ್ರೈವ್) ಗಳು ವಿದ್ಯಾರ್ಥಿನಿಯರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಕೌಶಲ್ಯಾಭಿವೃದ್ಧಿಯ ಮೇಲೂ ಗಮನಹರಿಸಿ, ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಪ್ರೇರೇಪಿಸಿದರು. ಪದವಿ ಮುಗಿಸಿದ ನಂತರ ತಮ್ಮ ಸಾಮರ್ಥ್ಯಗಳಿಗೆ ಅನುಸಾರ ನೇಮಕಾತಿ ಆದೇಶವನ್ನು ನೀಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪೋರ್ಟಲ್ ಹೆಚ್.ಆರ್. ಕನ್ಸಲನ್ಸಿ ಸರ್ವಿಸಸ್‌ನ ಹೆಚ್.ಆರ್. ಶ್ರೀಮತಿ ಪೂಜಾ ಮತ್ತು ಶ್ರೀಮತಿ ಕಾವ್ಯಾ, ಅಮ್ಮಣ್ಣ ಕುರುಂದವಾಡ, ಶ್ರೀಮತಿ ಶಿವಲೀಲಾ ಎಚ್., ಡಾ. ಬಿ. ಎಮ್. ಕೊರಬು, ಪ್ರಭು ಅವರಾದಿ, ಶ್ರೀಮತಿ ಅನಸೂಯಾ ವಾಯ್. ಮಬ್ರುಮಕರ, ಎಸ್. ಬಿ. ತೇರದಾಳ, ಕು. ವಿನಾಯಕ ಹಿಮಕರ ಉಪಸ್ಥಿತರಿದ್ದರು.
ಸದರಿ ಕ್ಯಾಂಪಸ್ ಡ್ರೈವ್‌ನಲ್ಲಿ ಸುಮಾರು 415 ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಅವರಲ್ಲಿ 67 ವಿದ್ಯಾರ್ಥಿನಿಯರಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು.

