ಲೇಖನ. – ಜಯಶ್ರೀ ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಹುಟ್ಟು ನಮ್ಮ ಕೈಯಲ್ಲಿಲ್ಲ. ಆದ್ದರಿಂದಲೇ ಕೆಲವರು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದರೆ, ಇನ್ನು ಕೆಲವರು ಕಿತ್ತು ತಿನ್ನುವ ಬಡತನದಲ್ಲಿ ಹುಟ್ಟುತ್ತಾರೆ. ಅಂಥವರು ಕನಿಷ್ಟ ಅಗತ್ಯಗಳಿಗೂ ದಿನನಿತ್ಯ ಹೋರಾಡಬೇಕಾಗುತ್ತದೆ. ಈ ಸಂಗತಿ ನಮ್ಮ ಸುತ್ತಲಿನ ಸಮಾಜ ನೋಡಿದಾಗ ಅನುಭವಕ್ಕೆ ಬಂದೇ ಬರುತ್ತದೆ. ಹುಟ್ಟು ಸಾವುಗಳ ನಡುವಿನ ಜೀವನ ಮಾತ್ರ ನಮ್ಮ ಕೈಯಲ್ಲಿದೆ ಎಂಬುದನ್ನು ಬಹುತೇಕರು ಮರೆತು ನಡೆಯುತ್ತಾರೆ. ವಿಚಿತ್ರವೆಂದರೆ ಇತಿಹಾಸ ಸೃಷ್ಟಿಸಿದ ಅನೇಕರು ಹುಟ್ಟಿದ್ದು ಬೆಳೆದದ್ದು ಏನೂ ಇಲ್ಲದ ಪರಿಸ್ಥಿತಿಯಲ್ಲಿ ಇಲ್ಲವೇ ಸಾಮಾನ್ಯವೆನಿಸುವ ಕುಟುಂಬದಲ್ಲಿ. ಇಲ್ಲಿ ಕಷ್ಟಗಳು ಕತ್ತಲೆಯಂತೆ ಕತ್ತಲೆಯನ್ನು ಎದೆಗಾರಿಕೆಯಿಂದ ಎದುರಿಸಿದ ಮೇಲೆ ಬಾಲ ನೇಸರನ ಹೊಂಬಣ್ಣದ ಸುಖದ ಹಗಲು ಎದುರು ಆಗಲೇಬೇಕು. ಏನೂ ಇಲ್ಲದ ಸ್ಥಿತಿಯಿಂದ ಆರಂಭಿಸಿ, ಸಾಧನೆಯ ಹಾದಿಯಲ್ಲಿರುವ ಕಲ್ಲು ಮುಳ್ಳುಗಳಂತಿರುವ ಕಷ್ಟಗಳನ್ನು ಮೆಟ್ಟಿ ನಿಂತು ವಿಜಯದ ಶಿಖರವನ್ನು ತಲುಪಿದ ಎಷ್ಟೋ ಮಹನೀಯರ ಕಥೆಗಳು ನಮಗೆ ಸ್ಪೂರ್ತಿಯಾಗಿ ನಿಲ್ಲುತ್ತವೆ.
ಹಾಗಾದರೆ ಕಷ್ಟಗಳ ನಡುವೆಯೂ ಗೆಲುವಿನ ಶಿಖರವೇರಲು ಶೂನ್ಯದಿಂದ ಶಿಖರದೆತ್ತರಕ್ಕೇರಲು ಮಾಡಬೇಕಾದುದೇನು ತಿಳಿಯೋಣ ಬನ್ನಿ.

ಅವಕಾಶಗಳು
ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಲು ಮತ್ತು ಯಾವುದೇ ಸಾಧನೆ ಮಾಡಲು ಅವಕಾಶಗಳು ಮಹಾದ್ವಾರಗಳಂತೆ ಕೆಲಸ ಮಾಡುತ್ತವೆ. ಪ್ರತಿಯೊಂದು ಅವಕಾಶವೂ ಹೊಸ ಸವಾಲುಗಳನ್ನು ತರುತ್ತದೆ ಎಂಬುದನ್ನು ತಿಳಿದುಕೊಂಡು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ‘ಅವಕಾಶಗಳು ಬಾಗಿಲು ಬಡಿಯುತ್ತವೆ.’ ಎನ್ನುವುದು ಹಳೆಯ ಮಾತು. ಇಂದು ನಾವೇ ಮುನ್ನುಗ್ಗಿ ಹೊಸ ಅವಕಾಶಗಳನ್ನು ಹುಡುಕಿಕೊಳ್ಳಬೇಕು. ಅವಕಾಶಗಳನ್ನು ತಟ್ಟೆಯಲ್ಲಿಟ್ಟು ನೀಡಲಾಗುವುದಿಲ್ಲ. ಅವು ಎಲ್ಲರಿಗೂ ಸಮಾನವಾಗಿ ಸಿಗುವುದೂ ಇಲ್ಲ. ಅವುಗಳು ‘ಕಷ್ಟವೆಂಬ ಮಾರುವೇಷದ ರ‍್ಯಾಪರ್ ಸುತ್ತಿಕೊಂಡು ಬರುತ್ತವೆ. ಕೇವಲ ಮೇಲಿನ ರ‍್ಯಾಪರ್ ನೋಡಿ ಬಿಟ್ಟರೆ ಅದರೊಳಗಿರುವ ಗೆಲುವಿನ ಸಿಹಿಯನ್ನು ಕಳೆದುಕೊಳ್ಳುತ್ತೇವೆ’ ಸಿಕ್ಕ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಅವಕಾಶಗಳು ಯಾವಾಗ ಬರುತ್ತವೆ ಎಂಬುದನ್ನು ಹೇಳಲು ಬರುವುದಿಲ್ಲ. ಆದರೆ ಅವು ಬಂದಾಗ ಬಳಸಿಕೊಳ್ಳಲು ನಾವು ಯಾವಾಗಲೂ ಸಿದ್ಧರಾಗಿರಬೇಕು. ಆಗ ಸಿಗುವ ಸಣ್ಣ ಪುಟ್ಟ ಅವಕಾಶಗಳನ್ನು ಯಶಸ್ಸನ್ನಾಗಿ ಪರಿವರ್ತಿಸಲು ಸಹಕಾರಿಯಾಗಿತ್ತದೆ.
ಸೋಲು
ಯಶಸ್ವಿ ವ್ಯಕ್ತಿಗಳು ಬಿದ್ದಾಗೊಮ್ಮೆ ತಮ್ಮಲ್ಲಿರುವ ಎಲ್ಲಾ ಶಕ್ತಿಯನ್ನು ಹಾಕಿ ಎದ್ದು ನಿಲ್ಲಲು ಯತ್ನಿಸುತ್ತಾರೆ. ಸೋಲಿಗೆ ಭಯಪಡುವುದೇ ಇಲ್ಲ. ಕುಗ್ಗುವುದೂ ಇಲ್ಲ. ನೂರಾರು ಬಾರಿ ಸೋಲನ್ನು ಅನುಭವಿಸಿದರೂ ಸೋಲಿನ ಬಗ್ಗೆ ಚಿಂತಿಸುವುದೇ ಇಲ್ಲ. ಸೋಲಿಗೆ ಹೆದರದೆ ಮತ್ತೆ ಮತ್ತೆ ಪ್ರಯತ್ನಿಸುವ ಛಲ ತೋರುತ್ತಾರೆ. ಅವುಗಳನ್ನೇ ಗೆಲುವಿನ ಮೆಟ್ಟಿಲಾಗಿಸುವ ಜಾಣ್ಮೆಯನ್ನೂ ಮೆರೆಯುತ್ತಾರೆ. ಸೋಲೆಂಬುದು ಜೀವನದ ಅಂತ್ಯವಲ್ಲ. ಅದೊಂದು ಹೊಸ ಗೆಲುವಿನ ಆರಂಭ. ಎಂಬ ಸಂಗತಿಯನ್ನು ಮನಗಂಡು ಸೋಲಿನಿಂದ ಅನುಭವದ ಪಾಠಗಳನ್ನು ಕಲಿಯಬೇಕು. ನೀವು ಮಾಡಿದ ತಪ್ಪುಗಳು ಯಾವವು ಅವುಗಳನ್ನು ಹೇಗೆ ತಿದ್ದಿಕೊಳ್ಳಬೇಕೆಂಬ ಅರಿವು ಮೂಡುತ್ತದೆ. ‘ಗೆದ್ದಾಗ ಬೀಗಬೇಡಿ ಸೋತಾಗ ಕುಗ್ಗಬೇಡಿ.’ ಎಂಬ ನಾಣ್ಣುಡಿಯಂತೆ ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮುನ್ನಡೆಯಬೇಕು.
ಕಷ್ಟಗಳು
ಪ್ರಪಂಚದಲ್ಲಿ ಕೇವಲ ಹಗಲು ಇಲ್ಲವೇ ಕೇವಲ ರಾತ್ರಿಯಿರುವುದಿಲ್ಲ ಅಲ್ಲವೇ? ಅದೇ ರೀತಿ ಬದುಕಿನಲ್ಲಿ ಕೇವಲ ಕಷ್ಟ ಇಲ್ಲವೇ ಕೇವಲ ಸುಖ ಇರುವುದಿಲ್ಲ. ಹಗಲು ಕಳೆದ ಮೇಲೆ ರಾತ್ರಿ ಬರುತ್ತದೆ. ಕತ್ತಲೆ ಎಂದು ಅಳುತ್ತ ಕೂರುವ ಹಾಗಿಲ್ಲ ಏಕೆಂದರೆ ಕತ್ತಲೆಯ ಹಿಂದೆ ಹಗಲು ಬಂದೇ ಬರುತ್ತದೆ. ಹಾಗೆಯೇ ಬದುಕು ಕೇವಲ ಸುಖದ ಸಾಗರವಲ್ಲ. ಕಷ್ಟಗಳನ್ನು ಎದುರಿಸುವುದರಿಂದ ತಾಳ್ಮೆ ಸಹನೆ ಧೈರ್ಯ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಮಾನಸಿಕವಾಗಿ ಬಲಿಷ್ಠಗೊಳಿಸುತ್ತದೆ. ಒಂದು ದಾರಿ ಮುಚ್ಚಿದಾಗ ಮತ್ತೊಂದು ದಾರಿಯನ್ನು ಹುಡುಕಲು ಪ್ರೇರೇಪಿಸುತ್ತದೆ. ಸೃಜನಶೀಲತೆಯನ್ನು ಹೆಚ್ಚಿಸತ್ತದೆ. ಕಷ್ಟಗಳನ್ನು ಅಡಚಣೆಗಳೆಂದು ಗೋಳಾಡದೇ ಇಷ್ಟಪಟ್ಟು ಕಷ್ಟಗಳನ್ನು ಎದುರಿಸಬೇಕು. ಆಗ ಸಿಗುವ ಸಂತೋಷ ಅಪಾರವಾದದ್ದು.
ಸಮಯ
‘ಸಮಯ ಮತ್ತು ಸಮಯದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ.’ ಕಾಲ ಮಿಂಚಿ ಹೋದ ಮೇಲೆ ಕಣ್ಣೀರು ಇಟ್ಟರೆ ಪ್ರಯೋಜನವಿಲ್ಲ. ಸಮಯವನ್ನು ಸರಿಯಾಗಿ ಬಳಸಿಕೊಳ್ಳಬೇಕು ಅಂದರೆ ಸಿಕ್ಕ ಅವಕಾಶಗಳನ್ನು ತಕ್ಷಣವೇ ಗುರುತಿಸಿ ಬಳಸಿಕೊಳ್ಳಬೇಕು. ವ್ಯರ್ಥ ಮಾಡಿದ ಸಮಯ ವಿಷಾದವನ್ನು ಮಾತ್ರ ಉಳಿಸುತ್ತದೆ. ಕೆಲಸವನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಮಾಡುವುದರಿಂದ ಕೊನೆಯ ಕ್ಷಣದ ಆತಂಕ ಮತ್ತು ಒತ್ತಡ ನಿವಾರಣೆಯಾಗುತ್ತದೆ. ಆದ್ದರಿಂದ ಅಂದುಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕು. ಮೊಬೈಲ್ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಕಳೆಯುವ ಸಮಯವನ್ನು ಕಡಿತಗೊಳಿಸಬೇಕು. ಇಂದು ಮಾಡಬೇಕಾದ ಕೆಲಸ ಈಗಲೇ ಮಾಡಿ ನಾಳೆಗೆ ತಳ್ಳಬೇಡಿ.
ಭಯವಿಲ್ಲದ ಸ್ಥಿತಿ
ಏನೂ ಇಲ್ಲದ ಪರಿಸ್ಥಿತಿ ಎಂದರೆ ಕನಿಷ್ಟ ಸೌಲಭ್ಯಗಳು ಲಭ್ಯವಿಲ್ಲದ ಸ್ಥಿತಿ. ಏನೂ ಇಲ್ಲ ಎಂದರೆ ಏನನ್ನೂ ಕಳೆದುಕೊಳ್ಳುವ ಭಯವೂ ಇಲ್ಲದ ಸ್ಥಿತಿ. ಏನೂ ಇಲ್ಲದ ಹಂತದಿಂದ ಶುರುವಾಗುವ ಪ್ರತಿ ಹೆಜ್ಜೆಯೂ ಬದುಕಿನ ಹೊಸ ಹೊಸ ಪಾಠಗಳನ್ನು ಕಲಿಸುತ್ತಲೇ ಹೋಗುತ್ತದೆ. ಅಂದರೆ ಆ ಹೆಜ್ಜೆಗಳು ಬಹುತೇಕ ಲಾಭವನ್ನೇ ತರುತ್ತವೆ. ಆದರೆ ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ ಬಡತನವೆಂಬುದು ಒಂದು ಶಾಪ ಎಂದು ಭಯದಿಂದ ಅಳುತ್ತ ಕುಳಿತುಕೊಳ್ಳುವುದನ್ನು ಬಿಟ್ಟವರು, ಬಡತನವನ್ನು ಅಪಹಾಸ್ಯವೆಂದು ತಿಳಿಯದವರು, ಬಡತನವನ್ನೇ ವರವಾಗಿಸಿಕೊಂಡು,ನಿರ್ಭೀತಿಯಿಂದ ತಮ್ಮಲ್ಲಿರುವ ಸಾಮರ್ಥ್ಯವನ್ನು ಅರಿತು, ಜಗತ್ತಿಗೆ ಏನ್ನಾದರೂ ಸಾಧಿಸಿ ತೋರಿಸಬೇಕೆಂಬ ಛಲವನ್ನು ಹೊಂದಿದರು. ಇತಿಹಾಸ ಸೃಷ್ಟಿಸಿದರು. ಇತಿಹಾಸದ ಪುಟಗಳಲ್ಲಿ ಜಾಗ ಪಡೆದರು. ಅಂತೆಯೇ ನಾವು ಭಯವಿಲ್ಲದ ಸ್ಥಿತಿಯನ್ನು ಆತ್ಮವಿಶ್ವಾಸದಿಂದ ರೂಪಿಸಿಕೊಳ್ಳಬೇಕು.
ಹೊಸ ದಾರಿ
ಕವಿ ಗೋಪಾಲ ಕೃಷ್ಣ ಅಡಿಗರ ಕವಿತೆಯ ನುಡಿಯಂತೆ ‘ಹೊಸ ಹಾದಿಯನು ಹಿಡಿದು ನಡೆಯಣ್ಣ ಮುಂದೆ ಹೊಸ ಜೀವ ಹೊಸ ಭಾವ ಹೊಸ ವೇಗದಿಂದ.’ ಜೀವನದಲ್ಲಿ ಪ್ರಗತಿ ಸಾಧಿಸಲು ಹೊಸ ಹಾದಿಯನ್ನು ಕಂಡುಕೊಳ್ಳಬೇಕು. ಅಂದರೆ ಸಾಂಪ್ರದಾಯಿಕ ಮಾರ್ಗವನ್ನು ಬಿಟ್ಟು ಹೊಸ ಆಲೋಚನೆ ಮತ್ತು ಹೊಸ ಪ್ರಯತ್ನದಿಂದ ಮುನ್ನಡೆಯಬೇಕು. ಇತಿಹಾಸ ಸೃಷ್ಟಿಸುವುದು, ಇತಿಹಾಸದ ಪುಟಗಳಲ್ಲಿ ಜಾಗ ಪಡೆಯುವುದು ಅಷ್ಟೇನು ಸುಲಭದ ಕೆಲಸವಲ್ಲ. ಅದು ಯಾರೂ ನಡೆಯದ ಹಾದಿ. ಹಾದಿಯನ್ನು ನಾವೇ ಸೃಷ್ಟಿಸಬೇಕು. ಈಗಾಗಲೇ ಸಾವಿರಾರು ಜನರು ನಡೆದ ದಾರಿಯಾದರೆ ಅಲ್ಲಿ ಕಲ್ಲು ಮುಳ್ಳುಗಳು ವಿರಳ. ನಮ್ಮದೇ ಆದ ಹೊಸ ದಾರಿ ಸೃಷ್ಟಿಸುವಾಗ ಆ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಕಲ್ಲು ಮುಳ್ಳುಗಳು ಅಡೆತಡೆಗಳು ಎದುರಾಗುವುದು ಸಹಜ. ಅಡೆತಡೆಗಳನ್ನು ಅಡಚಣೆಗಳೆಂದು ತಿಳಿಯದೇ ಅವಕಾಶಗಳೆಂದು ಮುನ್ನುಗ್ಗಿದರೆ ಗೆಲುವಿನ ಶಿಖರ ಏರುವುದು ಖಂಡಿತ.
ಮಾರ್ಗದರ್ಶನ
ಅತಿ ಕಡಿಮೆ ಹಣದೊಂದಿಗೆ ಮುಂಬೈಗೆ ಬಂದು ಇಂದು ದೇಶದ ಬೃಹತ್ ಉದ್ಯಮದ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಧೀರೂ ಭಾಯಿ ಅಂಬಾನಿ ನಮಗೆಲ್ಲ ಮಾದರಿ. ಚಂದ್ರನಿಲ್ಲದೆಡೆ ನಕ್ಷತ್ರಗಳ ಮಾರ್ಗದರ್ಶನ ಪಡೆದು ನಡೆಯಬೇಕು. ಈಗಾಗಲೇ ಸಾಕಷ್ಟು ಸಾಧಕರು ಸಾಧನೆಯ ಹಾದಿಯಲ್ಲಿ ಸಾಗಿ ನಕ್ಷತ್ರಗಳಾಗಿ ಸಾಧನೆಯ ಅಂಬರದಲ್ಲಿ ಮಿಂಚುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ದೊಡ್ಡವರೆನಿಸಿಕೊಂಡವರು, ಹುಟ್ಟಿನಿಂದಲೇ ದೊಡ್ಡವರಾಗಿರಲಿಲ್ಲ. ಯಾರೂ ಕೂಡ ಹುಟ್ಟುತ್ತಲೇ ಗೆಲುವಿನ ಶಿಖರದಲ್ಲಿರುವುದಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಗೆಲುವಿನ ಪಯಣ ಆರಂಭಿಸಬೇಕು. ಅದರಲ್ಲೂ ಕೆಲವರು ಶೂನ್ಯದಿಂದಲೇ ಪ್ರಯಾಣ ಆರಂಭಿಸಬೇಕಾಗುತ್ತದೆ. ಅವರೆಲ್ಲ ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆಂಬ ವಿಶ್ವಾಸದಿಂದ ಪ್ರಾಮಾಣಿಕತೆಯಿಂದ ಪರಿಶ್ರಮದ ಹಾದಿಯಲ್ಲಿ ಸಾಗುತ್ತಾರೆ. ಹಾಗೆಯೇ ನಾವೂ ಸಹ ಅವಿರತ ಪ್ರಯತ್ನದ ಹಾದಿಯಲ್ಲಿ ಸಾಗಿದರೆ, ಅದು ಯಶಸ್ಸಿನ ಶಿಖರಕ್ಕೆ ಕರೆದೊಯ್ಯುತ್ತದೆ.


