ಹೆಚ್ ಡಿ ಕೋಟೆಯಲ್ಲಿ ಜೆಡಿಎಸ್ ಮುಖಂಡ ಕೆ.ಎಂ.ಕೃಷ್ಣನಾಯಕ ಭವಿಷ್ಯ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: 2028 ಕ್ಕೆ ಎನ್ ಡಿಎ ಸರ್ಕಾರ ಬರಲಿದ್ದು, ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಜನರಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ, ಪಕ್ಷದ ಕಾರ್ಯಕರ್ತರಿಗೆ ಒಳ್ಳೆಯದಾಗುತ್ತೆ ಎಂದು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಭವಿಷ್ಯ ನುಡಿದರು.
ಪಟ್ಟಣದ ಬಿಜಿಎಸ್ ಕಲ್ಯಾಣ ಮಂಟಪದಲ್ಲಿ 53 ನೇ ಹುಟ್ಟುಹಬ್ಬದ ನಿಮಿತ್ತ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗು ಸಹಾಯಧನ ವಿತರಿಸಿ ಮಾತನಾಡಿದರು. ಕಳೆದ 10 ವರ್ಷಗಳಿಂದ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಈ ಬಾರಿ ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯದ ಮೇರೆಗೆ ಹುಟ್ಟುಹಬ್ಬ ಸಂಭ್ರಮದಲ್ಲಿ ಪಾಲ್ಗೊಂಡಿದ್ದೇನೆ. ಇಷ್ಟು ವರ್ಷಗಳಿಂದ ಹೆಚ್ ಡಿ ಕೋಟೆ ಕೋಟೆ ಕ್ಷೇತ್ರದಲ್ಲಿ ಏನು ಸಂಪಾದನೆ ಮಾಡಿದ್ದೇನೋ ಇಲ್ವೋ ಗೊತ್ತಿಲ್ಲ. ಆದರೆ ಜನರ ಪ್ರೀತಿ ಸಂಪಾದನೆ ಮಾಡಿದ್ದೇನೆ. ಜನರ ವಿಶ್ವಾಸ ಗಳಿಸಿದ್ದೇನೆ. ಇದಕ್ಕಿಂತ ಮತ್ತೇನು ಬೇಕು? ಎಂದರು.
ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಗೆ ಹೆಚ್ ಡಿ ಕೋಟೆ ತಾಲೂಕು ಪ್ರಥಮ ಸ್ಥಾನ ಬಂದಿದೆ. ಇದರ ಕ್ರೆಡಿಟ್ ಅನ್ನು ಮಕ್ಕಳಿಗೆ, ಅವರ ಪೋಷಕರಿಗೆ, ಶಿಕ್ಷಕರಿಗೆ ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜು ಅವರಿಗೆ ಕೊಡುತ್ತೇನೆ ಎಂದರು.
ಗೇಯುವ ಎತ್ತಿಗೆ ಮೇವು ಹಾಕಿ ಎಂಬ ಶಾಸಕ ಅನಿಲ್ ಚಿಕ್ಕಮಾದು ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ.ಎಂ. ಕೃಷ್ಣನಾಯಕ, ಗೇಯುವ ಎತ್ತು ಚೆನ್ನಾಗಿ ಕೆಲಸ ಮಾಡುತ್ತಿದೆಯೂ, ಇಲ್ಲವೋ ಎಂಬುದನ್ನು ಈ ಕ್ಷೇತ್ರದ ಜನತೆ ದಿನಾಲೂ ನೋಡುತ್ತಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲೂ ವೀಕ್ಷಣೆ ಮಾಡುತ್ತಿದ್ದಾರೆ. ಅವರ ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಬಗ್ಗೆ ಜಾಸ್ತಿ ಹೇಳಲ್ಲ. ಕ್ಷೇತ್ರದ ಜನತೆಯೇ ತೀರ್ಮಾನ ಮಾಡ್ತಾರೆ. ಸರ್ಕಾರದಿಂದ ಶಾಸಕರು 1600 ಕೋಟಿ ರೂಪಾಯಿ ಅನುದಾನ ತಂದಿದ್ದೀನಿ ಎಂದು ಹೇಳುತ್ತಿದ್ದಾರೆ. ಇದು ಬರೀ ಸುಳ್ಳು. ಕೆಆರ್ ಎಸ್ ಮಾದರಿಯಲ್ಲಿ ಕಬಿನಿ ಉದ್ಯಾನವನ ಮತ್ತು ಗಾರ್ಮೆಂಟ್ ನಿರ್ಮಾಣದ ಭರವಸೆ ಭರವಸೆಯಾಗಿಯೇ ಉಳಿದಿದೆ.. ನಾನು ಸುಖಾಸುಮ್ಮನೆ ಶಾಸಕರ ವಿರುದ್ಧ ಆರೋಪ ಮಾಡಿಲ್ಲ, ಜನರು, ಕಾರ್ಯಕರ್ತರು ನನ್ನ ಮುಂದೆ ಹೇಳುವ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೇನೆ. ಒಂದೇದಿನ ೮ ಜನಸಂಪರ್ಕ ಸಭೆ ಮಾಡಿದ್ದೇನೆ ಎಂದು ಶಾಸಕರು ಹೇಳಿದ್ದಾರೆ. ಒಂದೇ ದಿನ ೮ ಜನಸಂಪರ್ಕ ಸಭೆ ಮಾಡಲು ಸಾಧ್ಯನಾ? ಎಂದು ಪ್ರಶ್ನಿಸಿದರು.

