ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಂಪೂರ ಕೆಬಿಜೆಎನ್‌ಎಲ್ ಐಬಿಸಿ ಓ ಮತ್ತು ಎಂ ವಿಭಾಗ ಕಾರ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಹಾದಿಮನಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಪಿರೂ ಕೆರೂರ ಅವರು ಮುಖ್ಯ ಇಂಜನೀಯರ್ ಅವರಿಗೆ ಮನವಿ ಸಲ್ಲಿಸಿದರು.
ಇಲಾಖೆಯ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಘವೇಂದ್ರ ಆರ್. ಹಾದಿಮನಿ ಅವರು ಕಛೇರಿಗೆ ಬಂದ ರೈತರೊಡನೆ ಅನುಚಿತವಾಗಿ ವರ್ತನೆ ಮಾಡುತ್ತಾರೆ. ಜೊತೆಗೆ ಕರ್ತವ್ಯದ ಸಮಯದಲ್ಲಿ ಕಛೇರಿ ಬಿಟ್ಟು ಹೆಚ್ಚಿಗೆ ಹೊರಗೆ ಇರುತ್ತಾರೆ. ಸರ್ಕಾರದ ಸುತ್ತೋಲೆ ಪ್ರಕಾರ ೫ ವರ್ಷಗಳಿಗಿಂತ ಹೆಚ್ಚಿಗೆ ಒಂದೇ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ಆದೇಶವಿದೆ. ಈ ರೀತಿ ಸರ್ಕಾರದ ಆದೇಶವಿದ್ದರೂ ಸಹ ಇವರು ಅನೇಕ ವರ್ಷಗಳಿಂದ ಇಲ್ಲಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವರ್ಗಾವಣೆ ಇಲ್ಲಿಯವರೆಗೂ ಆಗಿರುವುದಿಲ್ಲ. ಇನ್ನೂ ಕರ್ತವ್ಯದ ಸಮಯದಲ್ಲಿ ಗುರುತಿನ ಚೀಟಿ ಧರಿಸದೇ ಬೇಜವಾಬ್ದಾರಿತನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು.
ಜೊತೆಗೆ ತಮ್ಮ ಹಂತದಲ್ಲಿದ್ದ ಇದ್ದ ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲ. ಯಾರೇ ಒಂದು ಸಣ್ಣ ಪತ್ರ ವಿಲೇವಾರಿ ಮಾಡಲು ಹಣ ಬೇಡಿಕೆ ಇಡುತ್ತಾರೆ ಎಂದು ರೈತರು ಹಲವು ಬಾರಿ ದೂರಿದ್ದಾರೆ. ಆದ ಕಾರಣ ಇವರನ್ನು ಆದಷ್ಟು ಬೇಗ ಕರ್ತವ್ಯದಿಂದ ವಜಾಗೊಳಿಸಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ತಾಲೂಕಾಧ್ಯಕ್ಷ ಸಿದ್ದು ಬೀರಗೊಂಡ, ಉಪಾಧ್ಯಕ್ಷ ಭೀಮು ಇಂಗಳಗಿ ಸುನೀಲ ಜಾಬಾನವರ, ಯೂನಿಸ್ ತಾಂಬೋಳ್ಳಿ, ಮಶಾಕಸಾಬ್ ವಾಲೀಕಾರ, ಮಲಕು ಹಿರೇಕುರುಬರ ಸೇರಿದಂತೆ ಇತರರು ಇದ್ದರು.

