ಸಿಂದಗಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೆಯ ಸಂಸ್ಥಾಪನಾ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕನ್ನಡವೆಂದರೆ ಕೇವಲ ಅದೊಂದು ಭಾಷೆಯಲ್ಲ. ಅದೊಂದು ಸಂಸ್ಕೃತಿಯ ಹಿರಿಮೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಎಸ್.ಹೈಯ್ಯಾಳಕರ ಹೇಳಿದರು.
ಸಿಂದಗಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ನೆಯ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕು. ಕನ್ನಡ ಭಾಷೆಯ ಅಸ್ಮಿತೆಗಾಗಿ ನಾವೆಲ್ಲರೂ ಹೋರಾಡಬೇಕು. ಭಾಷಾವಾರು ಹಾಗೂ ವಿಭಾಗವಾರು ತುಲನೆ ಮಾಡಿದಾಗ ಉತ್ತರ ಕರ್ನಾಟಕಕ್ಕೆ ಸದಾ ಅನ್ಯಾಯವಾಗುತ್ತಲೇ ಬಂದಿದೆ. ಇಂತಹ ಅನ್ಯಾಯವನ್ನು ಸರಿದೂಗಿಸುವ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು. ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಪತ್ರ ವ್ಯವಹಾರ ಕಡ್ಡಾಯಗೊಳಿಸಬೇಕು ಎಂದರು.
ಈ ವೇಳೆ ಉಪನ್ಯಾಸ ನೀಡಿದ ಎಚ್.ಜಿ. ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ೧೧೨ ಸಂವಸ್ತçಗಳನ್ನು ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಕೇವಲ ೪ ಸದಸ್ಯರೊಂದಿಗೆ ಪ್ರಾರಂಭವಾಗಿ ಇಂದು ಹೆಮ್ಮರವಾಗಿ ರಾಜ್ಯಾದ್ಯಂತ ತನ್ನದೇ ಆದ ಗಟ್ಟಿ ಛಾಪು ಮೂಡಿಸಿ ನಾಡು-ನುಡಿ, ನೆಲ-ಜಲ ರಕ್ಷಣೆಗೆ ಕಟಿಬದ್ಧವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ವೈ.ಸಿ.ಮಯೂರ ಪ್ರಾಸ್ತಾವಿಕ ಮಾತನಾಡಿದರು.
ತಾಲೂಕು ಗೌರವ ಕಾರ್ಯದರ್ಶಿ ಆನಂದ ಶಾಬಾದಿ ಸ್ವಾಗತಿಸಿ ನಿರೂಪಿಸಿದರು. ರವಿ ಹೊಳಿ ವಂದಿಸಿದರು. ಕಾರ್ಯಕ್ರಮದ ವೇದಿಕೆ ಮೇಲೆ ಸಿದ್ದಣ್ಣ ಕೂಚಬಾಳ, ಬಿಸಿಯೂಟದ ಅಧಿಕಾರಿ ಅರವಿಂದ ಡೋಣೂರ, ಶಾಂತಲಾ ಮೋಸಲಗಿ ಇದ್ದರು. ಕಾರ್ಯಕ್ರಮದಲ್ಲಿ ರಾಜಶೇಖರ್ ನರಗೋದಿ, ಶಾಂತು ರಾಣಾಗೋಳ, ಜೈಭೀಮ್ ತಳಕೇರಿ, ವಿಠ್ಠಲ್ ಬಾಗೇವಾಡಿ ಸೇರಿದಂತೆ ಕನ್ನಡಾಭಿಮಾನಿಗಳು ಇದ್ದರು.

