ಸಂಸದ ರಮೇಶ ಜಿಗಜಿಣಗಿ ಅವರಿಂದ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗದಗದಿಂದ ಮುಂಬಯಿಗೆ ಸಂಚರಿಸುವ ರೈಲ್ವೆಗೆ ಇಂಡಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದರಾದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.
ನಿಂಬೆ ಬೆಳೆಯ ಜಾಗತಿಕ ಟ್ಯಾಗ್ ಪಡೆದಿರುವ ದೇಶದ ಎಲ್ಲ ಕಡೆ ನಿಂಬೆ ಹಣ್ಣು ಸರಬರಾಜು ಮಾಡುವ ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗವಾಗಿರುವ ಇಂಡಿ ಸಾಕಷ್ಟು ವ್ಯಾಪಾರ ವಹಿವಾಟಿನಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ಅತ್ಯುತ್ತಮ ಗುಣಮಟ್ಟದ ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದು, ಜವಳಿ ವ್ಯಾಪಾರದ ಕೇಂದ್ರವಾಗಿರುವ ಇಂಡಿ ತಾಲೂಕು, ಪ್ರಸ್ತುತ ಪುರಸಭೆಯಿಂದ ನಗರಸಭೆ ಉನ್ನತೀಕರಣಗೊಂಡಿದೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ರೆವೆನ್ಯೂ ಸಂಗ್ರಹಿಸುತ್ತಿರುವ ತಾಲೂಕಾಗಿದೆ ಎಂದವರು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ತಾಲೂಕಾಗಿರುವ ಇಂಡಿ ನಗರದಿಂದ ಕಡಿಮೆ ದೂರದಲ್ಲಿ ಭೀಮಾನದಿಯಿದೆ. ಹೆಚ್ಚಿನ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಈ ಎಲ್ಲ ವಾಣಿಜ್ಯ ಬೆಳೆ ಬೆಳೆಯುವ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಗದಗದಿಂದ ಮುಂಬಯಿಗೆ ಸಂಚರಿಸುವ ಮಧ್ಯ ಮಾರ್ಗದಲ್ಲಿ ಇಂಡಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ವ್ಯವಸ್ಥೆಯಾದರೆ ಮುಂಬಯಿಗೆ ಹೋಗಿ ಬರುವ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಪುಷ್ಟಿ ನೀಡಿದಂತಾಗುವುದೆಂದು ಇಂಡಿ ತಾಲೂಕಿನ ಜನತೆ ಕೋರಿಕೆಯಾಗಿದೆ.
ಹಾಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಗದಗದಿಂದ ಮುಂಬಯಿಗೆ ಹೋಗುವ ರೈಲ್ವೆಯನ್ನು ಇಂಡಿ ರೈಲ್ವ ನಿಲ್ದಾಣದಲ್ಲಿ ಕ್ಷಣಕಾಲ ನಿಲುಗಡೆ ಮಾಡಬೇಕು. ಇದರಿಂದ ವ್ಯಾಪಾರ ವಹಿವಾಟಿಗೆ ತುಂಬಾ ಅನುಕೂಲವಾಗುವುದೆಂದು ಸಂಸದ ರಮೇಶ ಜಿಗಜಿಣಗಿ ಪತ್ರದಲ್ಲಿ ತಿಳಿಸಿದ್ದಾರೆ.

