ವಿಜಯಪುರ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಗರ್ಭಿಣಿಯರ ಆರೈಕೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ೧೨ ರಿಂದ ೧೪ ಬಾರಿ ನಿಯಮಿತವಾಗಿ ಕೈಗೊಳ್ಳಬೇಕು. ಅನಿಮಿಯಾ, ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಉಚಿತ ಆರೋಗ್ಯ ಚಿಕಿತ್ಸೆಯನ್ನು ಒದಗಿಸಬೇಕು ಎಂದರು.
ಜಿಲ್ಲೆಯಲ್ಲಿ ತಾಯಿ-ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಆರ್.ಸಿ.ಹೆಚ್ ತಂತ್ರಾಂಶದಲ್ಲಿ ಗರ್ಭಿಣಿಯರಿಗೆ ಕಾಲ-ಕಾಲಕ್ಕೆ ಆರೋಗ್ಯದ ಕುರಿತು ತಿಳಿವಳಿಕೆ ನೀಡುವಂತೆ ಸೂಚನೆ ನೀಡಿದರು.
ಹೆರಿಗೆಯ ನಂತರ ಮಗುವಿಗೆ ಒಂದು ವರ್ಷ ತುಂಬುವವರೆಗೆ ಪಡೆದುಕೊಳ್ಳಬೇಕಾದ ಚಿಕಿತ್ಸೆ, ಔಷಧೋಪಚಾರ, ಲಸಿಕೆ ಸೌಲಭ್ಯಗಳ ಮಾಹಿತಿಯನ್ನು ಒದಗಿಸಬೇಕು. ಜೊತೆಗೆ ಆರೋಗ್ಯ ಸೇವಾ ಸೌಲಭ್ಯಗಳ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಜಿಲ್ಲೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಗರ್ಭಿಣಿಯರು, ಅನಾರೋಗ್ಯ ಪೀಡಿತರು ಮತ್ತು ಬಹಳ ಸಮಯದಿಂದ ಔಷಧಿ ಸೇವಿಸುತ್ತಿರುವವರು ಬಿಸಿಲಿನಲ್ಲಿ ಹೆಚ್ಚು ಪರಿಶ್ರಮ ಮಾಡುವುದನ್ನು ತಪ್ಪಿಸಬೇಕು. ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಮಾಡುವದಕ್ಕೆ ಗುಣಾತ್ಮಾಕ ಆರೋಗ್ಯ ಸೇವೆ, ಪ್ರಸವ ಪೂರ್ವ ಆರೈಕೆ, ಗಂಡಾಂತರ ಗರ್ಭಿಣಿ ಹೆರಿಗೆಗಳನ್ನು ಗುರುತಿಸಿ ಅವರಿಗೆ ಪ್ರಸೂತಿ ತಜ್ಞ ವೈದ್ಯರಿಂದ ಆರೈಕೆ ಹಾಗೂ ಆಪ್ತ ಸಮಾಲೋಚನೆ ಮೂಲಕ ಶೇ.೧೦೦ರಷ್ಟು ಹೆರಿಗೆಗಳನ್ನು ಆರೋಗ್ಯ ಸಂಸ್ಥೆಗಳಲ್ಲಿ ಮಾಡಲಾಗುತ್ತಿದೆ ಎಂದರು.
ಪ್ರತಿ ವರ್ಷ ಸಾವಿರಾರು ಜನರು ವಿಶೇಷವಾಗಿ ಮಕ್ಕಳು ನಾಯಿ ಕಡಿತಕ್ಕೆ ಒಳಗಾಗುತ್ತಾರೆ. ಸರಿಯಾದ ಅರಿವು ಮತ್ತು ಮುನ್ನಚ್ಚೆರಿಕೆಗಳೊಂದಿಗೆ ನಾಯಿ ಕಡಿತವನ್ನು ತಡೆಗಟ್ಟಬಹುದು. ಆದ್ದರಿಂದ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರ‍್ಯಾಬೀಸ್ ವ್ಯಾಕ್ಸಿನೇಷನ್ (ಲಸಿಕೆ) ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಮತ್ತು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಶಿವಾನಂದ ಮಾಸ್ತಿಹೊಳಿ, ಡಿಎಚ್‌ಇ, ಡಬ್ಲೂಎಚ್.ಓ ಅಧಿಕಾರಿಗಳಾದ ಡಾ. ಮುಕುಂದ ಗಲಗಲಿ, ಆರ್.ಸಿಎಚ್‌ಒ ಬಿ.ಎಲ್.ಡಿ.ಈ ಸಂಸ್ಥೆಯ ಪ್ರಸೂತಿ ತಜ್ಞರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಎಲ್ಲ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು, ಎಲ್ಲ ತಾಲೂಕಾ ಆರೋಗ್ಯಾಧಿಕಾರಿಗಳು, ಮುಖ್ಯ ಆಡಳಿತ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

