ಆಲಮಟ್ಟಿ ಸಿಇ ಕಚೇರಿಗೆ ರೈತರ ಮುತ್ತಿಗೆ | ಕ್ಲೋಸರ್ ಕಾಮಗಾರಿ ವಿಳಂಬಕ್ಕೆ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಈ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಿಲ್ಲೆಯ ಎಲ್ಲ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲು ಕೂಡಲೇ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಹಾಗೂ ಕ್ಲೋಸರ್ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಅಖಂಡ ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಿದವು.
ಆಲಮಟ್ಟಿಯ ರಾಮಲಿಂಗೇಶ್ವರ ದೇವಸ್ಥಾನದಿಂದ ನೂರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಸಿಇ ಕಚೇರಿಗೆ ತೆರಳಿ ಮುಖ್ಯ ಅಭಿಯಂತರ ಡಿ. ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲ್ಲೂಕಾಧ್ಯಕ್ಷ ಸೀತಪ್ಪ ಗಣಿ, “ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಮತ್ತು ಚಿಮ್ಮಲಗಿ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕಾಲುವೆಗಳಿಗೆ ಹಿಂಗಾರು ಬೆಳೆಗಳಿಗೆ ನೀರು ಹರಿಸಿ ನಂತರ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಪ್ರಾದೇಶಿಕ ಆಯುಕ್ತರ ಅನುಮತಿಯಂತೆ ಏಪ್ರಿಲ್ ೩೦ರವರೆಗೆ ಕೆರೆಗಳಿಗೆ ನೀರು ಹರಿಸಿ ಸದ್ಯ ಸ್ಥಗಿತಗೊಳಿಸಲಾಗಿದೆ” ಎಂದರು.
“ಆದರೆ ಇಲ್ಲಿಯವರೆಗೂ ಕೇವಲ ಶೇ.೩೦ರಿಂದ ೩೫ರಷ್ಟು ಮಾತ್ರ ಕೆರೆಗಳು ಭರ್ತಿಯಾಗಿವೆ. ಈ ಬಾರಿ ಬೇಸಿಗೆಯ ತಾಪ ಹೆಚ್ಚಿರುವುದರಿಂದ ಅಲ್ಪ ಪ್ರಮಾಣದಲ್ಲಿ ಹರಿಸಿದ ನೀರು ಬೇಗನೆ ಆವಿಯಾಗಿ ಖಾಲಿಯಾಗುತ್ತಿದೆ. ಇನ್ನೂ ಒಂದು ತಿಂಗಳು ಬೇಸಿಗೆ ಇರುವುದರಿಂದ ಕೆರೆಗಳಲ್ಲಿನ ನೀರು ಬೇಗನೆ ಬರಿದಾಗಲಿದೆ. ಮುಂದೆ ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಆದ್ದರಿಂದ ತುರ್ತಾಗಿ ಕಾಲುವೆಗಳಿಗೆ ನೀರು ಹರಿಸಿ ಜಿಲ್ಲೆಯ ಎಲ್ಲ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕು” ಎಂದು ಆಗ್ರಹಿಸಿದರು.
“ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ ಕೂಡಲೇ ಕ್ಲೋಸರ್ ಕಾಮಗಾರಿ ಪ್ರಾರಂಭಿಸಬೇಕು. ಪ್ರತಿ ವರ್ಷ ಕ್ಲೋಸರ್ ಕಾಮಗಾರಿ ಕುಂಠಿತಗೊಳ್ಳುತ್ತಿದೆ. ಸರಿಯಾಗಿ ಕಾಮಗಾರಿ ಮಾಡದ ಕಾರಣ ನೀರು ಬಿಟ್ಟಾಗ ಕಾಲುವೆಯಿಂದ ಸರಾಗವಾಗಿ ಹರಿಯುವುದಿಲ್ಲ. ಇದರಿಂದ ಕಾಲುವೆಯ ಕೊನೆಯ ಭಾಗದವರೆಗೂ ನೀರು ತಲುಪದೆ ರೈತರು ವಂಚಿತರಾಗುತ್ತಿದ್ದಾರೆ” ಎಂದು ದೂರಿದರು.
“ಪ್ರತಿ ವರ್ಷ ಕಾಲುವೆ ಸ್ವಚ್ಛಗೊಳಿಸಲು ಕ್ಲೋಸರ್ ಕಾಮಗಾರಿ ಮತ್ತು ವಾರ್ಷಿಕ ನಿರ್ವಹಣಾ ವೆಚ್ಚ (ಎಒಎಂ) ಎಂದು ಎರಡು ರೀತಿಯ ಯೋಜನೆ ಹಮ್ಮಿಕೊಳ್ಳಲಾಗುತ್ತದೆ. ಈ ಎರಡೂ ಯೋಜನೆಗಳಡಿ ಪ್ರತಿ ವರ್ಷ ಕೋಟ್ಯಂತರ ರೂ. ವ್ಯಯವಾಗುತ್ತಿದೆ. ಎರಡೂ ಯೋಜನೆಗಳ ಉದ್ದೇಶ ಒಂದೇ – ಕಾಲುವೆಯ ಹೂಳು, ಗಿಡಗಂಟಿಗಳನ್ನು ತೆರವುಗೊಳಿಸುವುದು. ಹೀಗಿದ್ದರೂ ಅನಾವಶ್ಯಕವಾಗಿ ಎರಡು ಯೋಜನೆಗಳ ನೆಪದಲ್ಲಿ ಸಾರ್ವಜನಿಕರ ಹಣ ದುರುಪಯೋಗ ಆಗುತ್ತಿದೆ ಎಂಬ ಅನುಮಾನವಿದೆ” ಎಂದು ಆರೋಪಿಸಿದರು.
“ಹೆಸರಿಗೆ ಮಾತ್ರ ಕ್ಲೋಸರ್ ಕಾಮಗಾರಿ ಮತ್ತು ಎಒಎಂ ಇದೆ. ಆದರೆ ವಾಸ್ತವಿಕವಾಗಿ ಕಾಲುವೆ ಸ್ವಚ್ಛಗೊಳಿಸುವ ಕಾರ್ಯ ನಡೆಯುವುದಿಲ್ಲ. ಇದರಿಂದ ಯೋಜನೆಯ ಉದ್ದೇಶವೇ ಹಳ್ಳ ಹಿಡಿದಂತಾಗಿದೆ. ಆದ್ದರಿಂದ ಕ್ಲೋಸರ್ ಕಾಮಗಾರಿಯನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕು” ಎಂದು ಅರವಿಂದ ಕುಲಕರ್ಣಿ ಹಾಗೂ ಜಿಲ್ಲಾಧ್ಯಕ್ಷ ಉಮೇಶ ವಾಲೀಕಾರ ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳು ಸಿಇ ಅವರಿಂದ ಅನುಮತಿ ಪಡೆಯಲು ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭಟನೆಯಲ್ಲಿ ಪ್ರಲ್ಹಾದ ನಾಗರಾಳ, ಸಾಯಬಣ್ಣ ಅಂಗಡಿ, ಇಬ್ರಾಹಿಂ ವಾಲೀಕಾರ, ಮಲ್ಲಪ್ಪ ಹಳೆನಿಡಗುಂದಿ, ಬಸಪ್ಪ ತೋಳಮಟ್ಟಿ, ಶ್ರೀಶೈಲ ಕಲಾದಗಿ, ಗುರಪ್ಪ ಪೂಜಾರಿ, ಸಂದೀಪ ನಾಗರಡ್ಡಿ, ಸೋಮೇಶ ನಾಗರಡ್ಡಿ, ಮುದಕಪ್ಪ ಮೇಟಿ, ಮಂಜು ಬಿರಾದಾರ, ಅಶೋಕ ಹಡಪದ, ಎಮನೂರಪ್ಪ ಸರೂರ, ಸಂಗು ಮೇಟಿ, ಹಣಮಂತ ವಾಲೀಕಾರ, ಪರಶೂರಾಮ ಮುತ್ತಗಿ, ಪ್ರಕಾಶ ವಾಲೀಕಾರ, ಶಿವಪ್ಪ ಚಲುವಾದಿ, ಸಂಗಪ್ಪ ಹುನಗುಂದ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

