ಲೇಖನ.
– ಡಾ. ಶಶಿಕಾಂತ ಪಟ್ಟಣ
ರಾಮದುರ್ಗ – ಪುಣೆ
ಮೊ: 9552002338
ಉದಯರಶ್ಮಿ ದಿನಪತ್ರಿಕೆ
ಕನ್ನಡ ಸಾರಸ್ವತ ಲೋಕದ ಒಂಟಿ ಸಲಗ ವಿಮರ್ಶಕ ಕವಿ ನಾಟಕಕಾರ ಅನುವಾದಕರು ಅಪರೂಪದ ಕ್ರಾಂತಿಕಾರಕ ಕವಿ ಸಾಹಿತಿ ಡಾ ಬುದ್ದಣ್ಣ ಹಿಂಗಮಿರೆ.
ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ರಾಜಾಪುರ ದಲ್ಲಿ ಸೆಪ್ಟೆಂಬರ್ 4 1933 ರಂದು ಜನಿಸಿದರು. ಅವರ ಈ ಗ್ರಾಮವು ಈಗ ಮಹಾರಾಷ್ಟ್ರದಲ್ಲಿದೆ.
ಅಥಣಿಯ ಕೆಎಲ್‌ಇ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಬಳಿಕ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಧಾರವಾಡ ಕರ್ನಾಟಕ ಕಾಲೇಜಿನ ಉಪನ್ಯಾಸಕರಾಗಿ ಬಳಿಕ ಕರ್ನಾಟಕ ವಿ.ವಿ.ಯ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರಾಗಿ ವಿಭಾಗ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.

ಬುದ್ಧಣ್ಣ ಹಿಂಗಮಿರೆ ಒಬ್ಬ ಕನ್ನಡದ ಕವಿ, ನಾಟಕಕಾರ, ವಿಮರ್ಶಕ ಮತ್ತು ಅನುವಾದಕರಾಗಿದ್ದು, ಇವರು ತಮ್ಮ ಶೋಕ ಕಾವ್ಯ ಕುರಿತ ಪ್ರಬಂಧಕ್ಕಾಗಿ ಪಿ ಎಚ್ ಡಿ ಪಡೆದಿದ್ದು, ರಷ್ಯನ್ ಭಾಷೆಯಲ್ಲೂ ಪರಿಣತಿ ಹೊಂದಿದ್ದರು. ಇವರ ಪ್ರಮುಖ ಕೃತಿಗಳಲ್ಲಿ ‘ಹುಲ್ಲುಗೆಜ್ಜೆ’, ‘ಶಬ್ದ’, ‘ರಕ್ತ’ ಮತ್ತು ‘ತೀರ್ಪು’, ‘ಸಂಗೊಳ್ಳಿ ರಾಯಣ್ಣ’ ಮುಂತಾದ ನಾಟಕಗಳು ಸೇರಿವೆ.
ವಿದ್ಯಾಭ್ಯಾಸ ಮತ್ತು ವೃತ್ತಿಜೀವನ
ಲಿಂಗರಾಜ ಕಾಲೇಜು, ಬೆಳಗಾವಿಯಿಂದ ಬಿ.ಎ. ಪದವಿ.
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ರಷ್ಯನ್ ಭಾಷೆಯಲ್ಲಿ ಎಂ.ಎ..
ಪುಣೆ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಶೋಕ ಕಾವ್ಯ ಕುರಿತು ಎಂ.ಎ. ಮತ್ತು ಪಿ.ಎಚ್.ಡಿ..
ಅಥಣಿ, ನಿಪ್ಪಾಣಿ, ಹುಬ್ಬಳ್ಳಿ ಮತ್ತು ಧಾರವಾಡದ ಕರ್ನಾಟಕ ಕಲಾ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು.
ಪ್ರಮುಖ ಕೃತಿಗಳು
ಕಾವ್ಯಗಳು: ಹುಲ್ಲುಗೆಜ್ಜೆ, ಶಬ್ದ, ರಕ್ತ.
ನಾಟಕಗಳು: ತೀರ್ಪು ಮತ್ತು ಇತರ ನಾಟಕಗಳು (ಜೀಸಸ್ ಕ್ರಿಸ್ತ್, ರಾಜಾ ಪುಲಕೇಶಿ, ಸಂಗೊಳ್ಳಿ ರಾಯಣ್ಣ ಇತ್ಯಾದಿ), ಸಂಗೊಳ್ಳಿ ರಾಯಣ್ಣ ಮತ್ತು ಇತರ ನಾಟಕಗಳು.
ಗೌರವಗಳು:
ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ಸೋವಿಯತ್ ಲ್ಯಾಂಡ್ ಪ್ರಶಸ್ತಿ.
ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಪ್ರಶಸ್ತಿ.
ಇತರ ಕೊಡುಗೆಗಳು
ರಷ್ಯನ್ ಭಾಷಾ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರು.
ಆಕಾಶವಾಣಿಯ ರಾಷ್ಟ್ರೀಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದರು.
ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಸೋವಿಯತ್ ರಷ್ಯಾದ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು ವಿಶೇಷ ಆಸಕ್ತಿ ವಹಿಸಿ ರಷ್ಯನ್ ಕಲಿತು ಸುಮಾರು 10ಕ್ಕೂ ಅಧಿಕ ರಷ್ಯನ್ ಕವನ ಸಂಕಲನಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಆದ್ದರಿಂದ ರಷ್ಯಾದ ಬೋಲ್ಸೆವಿಕ್ ನೇತೃತ್ವದ ಸೋವಿಯತ್ ಸರ್ಕಾರ ಬುದ್ದಣ್ಣ ಅವರಿಗೆ ಪುಷ್ಕಿನ್ ಪ್ರಶಸ್ತಿ ಪ್ರದಾನ ಮಾಡಿತ್ತು.ಬುದ್ಧ ಕಾವ್ಯ ದರ್ಶನ~ ಬರೆಯುವ ಮೂಲಕ ಬುದ್ದನ ಕುರಿತ ಕನ್ನಡದ ಮೊಟ್ಟಮೊದಲ ಮಹಾಕಾವ್ಯ ಬರೆದ ಶ್ರೇಯವನ್ನು ತಮ್ಮದಾಗಿಸಿಕೊಂಡರು. ಶಬ್ದ ರಕ್ತ ಮಾಂಸ, ಹುಲ್ಲು ಹೆಜ್ಜೆ, ಹದ್ದುಗಳ ಹಾಡು ಸೇರಿದಂತೆ ಹಲವು ಕವನ ಸಂಕಲನಗಳನ್ನು ಬರೆದಿದ್ದರು. ಅವರ ಹಲವು ಕವನಗಳು ಆಕಾಶವಾಣಿಯಲ್ಲಿ ಬಿತ್ತರವಾಗುತ್ತಿವೆ. 10 ವರ್ಷಗಳ ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಾಹಿತ್ಯ ಮಂಟಪದ ಸಂಚಾಲಕರಾಗಿ, ಹುಬ್ಬಳ್ಳಿಯ ಸಾಹಿತ್ಯ ಮಂಟಪದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೊದಲ ಬಾರಿಗೆ 1972ರದಲಿತ~ ಪತ್ರಿಕೆ ಹೊರಡಿಸುವ ಮೂಲಕ ದಲಿತ ಸಂವೇದನೆ ಬರಹಗಾರರನ್ನು ಪ್ರೋತ್ಸಾಹಿಸಿದ್ದರು.
ರಷ್ಯಾ ದೇಶದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದ ಅವರು, ಪ್ರತಿ ಸಭೆಯಲ್ಲಿಯೂ ಭಾಷಣ ಮಾಡುವಾಗ ಮಾತು ರಷ್ಯಾದತ್ತ ಹೊರಳುತ್ತಿತ್ತು. ಸಮಾಜವಾದಿ ಸಿದ್ಧಾಂತ ಹಾಗೂ ಕಾರ್ಲ್‌ಮಾರ್ಕ್ಸ್, ವಿ.ಐ.ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು.
ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೃಷ್ಣಾ ನದಿ ತೀರದ ರಾಜಾಪುರ ಎಂಬ ಕುಗ್ರಾಮ ಹಿಂಗಮಿರೆ ಅವರ ಹುಟ್ಟೂರು (ಜ: 1933). ಸ್ವಪ್ರಯತ್ನದಿಂದ ಶಿಕ್ಷಣ ಸಾಹಿತ್ಯದಂಥ ಸಂಸ್ಕಾರಗಳನ್ನು ರೂಢಿಸಿಕೊಂಡ ಅವರು, ಖಾಸಗಿ ನೋವು-ಆಘಾತಗಳ ನಡುವೆಯೂ ಬದುಕಿನ ಕುರಿತು ಅಪಾರ ಪ್ರೀತಿಯನ್ನು ಉಳಿಸಿಕೊಂಡು, ಎಲ್ಲರಿಗೂ ಪ್ರೀತಿಯನ್ನೇ ಹಂಚುತ್ತ, ತಾನೂ ಬೆಳೆದು ಇತರರನ್ನೂ ಬೆಳೆಸಿದರು.
ಸೋವಿಯೆತ್ ಲ್ಯಾಂಡ್ ನೆಹರು ಪ್ರಶಸ್ತಿಪಡೆವವರೆಗೆ; ಸುಮಾರು ಕಾಲು ಶತಮಾನದಿಂದ ತಮ್ಮ ಅಂತರಂಗದಲ್ಲಿ ರೂಪುಗೊಳ್ಳುತ್ತ ನಡೆದ ದರ್ಶನವೊಂದಕ್ಕೆ ಬದುಕಿನ ಇಳಿಸಂಜೆಯಲ್ಲಿಬುದ್ಧ ಕಾವ್ಯ ದರ್ಶನವೆಂಬ ಮಹಾಕಾವ್ಯದ ರೂಪು ಕೊಟ್ಟು, ಅದನ್ನು ಪ್ರಕಟಿಸಿಯೇ ಈ ಲೋಕದಿಂದ ನಿರ್ಗಮಿಸುವವರೆಗೆ ಬುದ್ದಣ್ಣ ಹಿಂಗಮಿರೆ ನಡೆದದ್ದು ನಿರಂತರ ಸಂಘರ್ಷದ ದಾರಿ. ಅಥಣಿಯ ಹೈಸ್ಕೂಲೊಂದರಲ್ಲಿ ಮಾಸ್ತರ್ ಆಗಿದ್ದ ಹಿಂಗಮಿರೆಯವರ ಜ್ಞಾನದಾಹ ಅವರನ್ನು ಸಾಂಗಲಿಯಲ್ಲಿದ್ದ ರಂ.ಶ್ರಿ.ಮುಗಳಿಯವರ ಬಳಿ ಕೊಂಡೊಯ್ದಿತು. ಮುಗಳಿಯವರ ಮಾರ್ಗದರ್ಶನದಲ್ಲಿ ಪ್ರೌಢಪ್ರಬಂಧ ಬರೆದು ಪೂನಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದು ನಿಪ್ಪಾಣಿ, ಹುಬ್ಬಳ್ಳಿ-ಧಾರವಾಡದ ಕಾಲೇಜುಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಕನ್ನಡ ಎಂ ಎ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಲೇ ವಿಶ್ವವಿದ್ಯಾಲಯದ ವಿದೇಶಿ ಭಾಷೆಗಳ ಅಧ್ಯಯನ ವಿಭಾಗದಲ್ಲಿ ರಷ್ಯನ್ ಭಾಷೆ-ಸಾಹಿತ್ಯದಲ್ಲಿ ಸ್ವತಃ ತಾವೂ ಎಂ.ಎ ಮಾಡಿದರು. ಮಾಸ್ಕೋನಗರದ ಪುಷ್ಕಿನ್ ಪ್ರತಿಮೆಯ ಬಳಿ ಸಾರ್ವಜನಿಕವಾಗಿ ಕವನವಾಚನ ಮಾಡುವವರೆಗೆ ಚಾಚಿಕೊಂಡ ಸುದೀರ್ಘ ಪಯಣವದು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಹಿತ್ಯಾಸಕ್ತಿಗೆ ನೀರೆರೆಯುವ ಅವರ ಆಸಕ್ತಿಯ ಫಲವಾಗಿ ವಿ.ಕೃ.ಗೋಕಾಕರ ಕಾಲದಿಂದ ಕರ್ನಾಟಕ ಕಾಲೇಜಿನ ಕನ್ನಡ ಸಂಘದ ಭಾಗವಾಗಿದ್ದ ಕಮಲ ಮಂಡಲ ಪ್ರಕಾಶನವನ್ನು ಮರುಜೀವಗೊಳಿಸಿದ ಅವರು, ಸ್ಪಂದನಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳ ಕವನಸಂಗ್ರಹ ಹೊರತಂದರು. ಅದರಲ್ಲಿ ನನ್ನ ಕವಿತೆಗಳೂ ಸೇರಿದ್ದವು.
ಅದಕ್ಕೆ ಮೊದಲು, ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಲೂ ಸಾಹಿತ್ಯಮಂಟಪ ಎಂಬ ವೇದಿಕೆ ರೂಪಿಸಿ ಸರಜೂ ಕಾಟಕರ, ಸತೀಶ ಕುಲಕರ್ಣಿ, ಗವಿಸಿದ್ಧ ಬಳ್ಳಾರಿಯಂಥ ಕವಿಗಳು ಕಾವ್ಯಲೋಕವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದರು. ಇಂದಿರಾಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಪರಿಣಾಮವಾಗಿ ನೆಲೆಸಿದ್ದ ವಿಲಕ್ಷಣ ಮೌನದ ನಡುವೆಯೇ ಬಂಡಾಯ, ಸಮುದಾಯ, ರೈತ, ದಲಿತ ಮತ್ತಿತರ ಜನಪರ ಚಳವಳಿಗಳು ಧಾರವಾಡದಲ್ಲಿ ತಲೆ ಎತ್ತತೊಡಗಿದ್ದ ದಿನಗಳವು. ಮಾರ್ಕ್ಸಿಸ್ಟ್ ಚಿಂತನೆಯ ಪ್ರಭಾವಕ್ಕೊಳಗಾಗಿದ್ದ ನಾವು ಕೆಲವರು ಅದೇ ಒಲವಿನ ಹಿಂಗಮಿರೆ ಅವರೊಂದಿಗೆ ಒಡನಾಡುವದು ಸಹಜವಾಗಿತ್ತು. ಒಂದೆಡೆ ಚಂದ್ರಶೇಖರ್ ಪಾಟೀಲರಂಥ ಸೋಷಲಿಸ್ಟರು ತುರ್ತುಸ್ಥಿತಿಯ ವಿರುದ್ಧ ದನಿ ಎತ್ತತೊಡಗಿದ್ದರೆ ಇನ್ನೊಂದೆಡೆ ಕಾದಂಬರಿಕಾರ ಬಸವರಾಜ ಕಟ್ಟೀಮನಿ, ವಿಮರ್ಶಕ ಶಂಕರ ಮೊಕಾಶಿ ಪುಣೇಕರ್ ಅಂಥವರು ತುರ್ತುಸ್ಥಿತಿಯನ್ನು ಸಮರ್ಥಿಸಿ ಇಂದಿರಾ ಭಜನೆ ಶುರು ಹಚ್ಚಿಕೊಂಡಿದ್ದರು. ಹಿಂಗಮಿರೆಯವರು ತುರ್ತುಪರಿಸ್ಥಿತಿಯನ್ನು ಸಮರ್ಥಿಸಿದ್ದರು ಎಂಬುದಕ್ಕಿಂತ ಅವರು ಕಮ್ಯುನಿಜಂನಲ್ಲಿ ಆಸ್ಥೆಯುಳ್ಳವರಾಗಿದ್ದಕ್ಕೂ ಮತ್ತು ರಾಷ್ಟ್ರಮಟ್ಟದಲ್ಲಿ ಸಿಪಿಐ (ಭಾರತ ಕಮ್ಯುನಿಸ್ಟ್ ಪಕ್ಷ ) ಇಂದಿರಾಗಾಂಧಿ ವಿಧಿಸಿದ್ದ ತುರ್ತುಸ್ಥಿತಿಯನ್ನು ಬೆಂಬಲಿಸಿದ್ದಕ್ಕೂ ತಳಕು ಹಾಕಿ, ಹಿಂಗಮಿರೆಯವರನ್ನು ತುರ್ತುಸ್ಥಿತಿಯ ತಾತ್ವಿಕ ಬೆಂಬಲಿಗರೆಂಬಂತೆ ಬಿಂಬಿಸುವ ಲೋಹಿಯಾವಾದಿ ಸೋಷಲಿಸ್ಟರ ರೆಟರಿಕ್ಕೇ ಹೆಚ್ಚಾಗಿತ್ತು. ತಮ್ಮ ಕುರಿತು ತಾವೇ ದೊಡ್ಡದಾಗಿ ಮಾತನಾಡಿಕೊಳ್ಳುವ ಜಾಯಮಾನದವರಲ್ಲದ ಹಿಂಗಮಿರೆ ತಮ್ಮಷ್ಟಕ್ಕೆ ತಾವು ಮೌನವಾಗಿ ಹಲವು ನಿಟ್ಟಿನಲ್ಲಿ ಕ್ರಿಯಾಶೀಲರಾಗಿದ್ದರು. ಅಂತಸ್ಸತ್ವದಲ್ಲಿ ನಿಜಕ್ಕೂ ಬಂಡಾಯಗಾರನಾದ ಮತ್ತು ಆ ಆಶಯದ ಕಾವ್ಯದ ಉತ್ತಮ ಪ್ರತಿನಿಧಿಯಾದ ಅವರು ಬಂಡಾಯ ಸಾಹಿತ್ಯ ಸಂಘಟಣೆಯ ವ್ಯಾಪ್ತಿಯೊಳಗೂ ಬರಲು ಬಯಸದೇ ತಮ್ಮ ಪಾಡಿಗೆ ತಾವಿದ್ದರು. ದಲಿತ ಹೋರಾಟವೆಂಬುದು ಕರ್ನಾಟಕದಲ್ಲಿ ಸಂಘಟಿತವಾಗಿ ರೂಪಗೊಳ್ಳುವ ಮೊದಲೇ ಹಿಂಗಮಿರೆಯವರು ಚೆನ್ನಣ್ಣ ವಾಲೀಕಾರ್ ಮತ್ತು ಸೋಮಶೇಖರ್ ಇಮ್ರಾಪೂರ ಅವರನ್ನು ಜೊತೆ ಮಾಡಿಕೊಂಡು ದಲಿತ ಎಂಬ ನಿಯತಕಾಲಿಕೆಯ ಹಲವು ಸಂಚಿಕೆಗಳನ್ನು 1974ರಿಂದಲೇ ಹೊರತಂದಿದ್ದರು. ತೆಲುಗಿನ ದಿಗಂಬರ ಕಾವ್ಯ, ಮರಾಠಿ ದಲಿತಕಾವ್ಯ ಮತ್ತು ನಾಮದೇವ ಢಸಾಳರಂಥ ಪ್ರಖರ ದಲಿತ ಕವಿಗಳು ಕನ್ನಡಕ್ಕೆ ಪರಿಚಯವಾದದ್ದೇ ಅದರ ಮೂಲಕ. 1977ರಲ್ಲಿ ಅವರ ಮೂರನೇ ಕವನ ಸಂಗ್ರಹಹದ್ದುಗಳ ಹಾಡುಬಿಡುಗಡೆಯಾಯಿತು. ಆ ಮೊದಲುಹುಲ್ಲುಗೆಜ್ಜೆ(1962) ಹಾಗೂ ಶಬ್ದರಕ್ತ ಮತ್ತು ಮಾಂಸ ( 1968) ಪ್ರಕಟವಾಗಿದ್ದವು. ಹುಲ್ಲುಗೆಜ್ಜೆಯಲ್ಲಿಕಿವುಡು ಭೂಮಿಕುರುಡುಗಾಳಿ/ ಹುಲ್ಲು-ಗೆಜ್ಜೆನಿನದ/ಒಮ್ಮೆ ಹಸಿರು ಒಮ್ಮೆ ಬರಡು/ ಸುಖ ದುಃಖದ ಮೋದಎಂಬಂಥ ರೂಪಕಗಳು,ಅಗ್ನಿ-ಬಂಡೆ ಸುತ್ತುವರಿವ/ಇದೊ ಬದುಕಿನ ಭ್ರಮಣ/ ಸರಸ-ವಿರಸ ಸ್ವಪ್ನ ನೆಯ್ದು/ ಹಾಡುತ್ತಿಹ ಹರಣಎಂಬಂಥ ಸಾಲುಗಳು ಶಕ್ತ ಕವಿಯೊಬ್ಬನ ಆಗಮನವನ್ನು ನಿಸ್ಸಂದೇಹವಾಗಿ ಸಾರಿದ್ದವು.ಶಬ್ದ ರಕ್ತ ಮತ್ತು ಮಾಂಸದಲ್ಲಿ ನಿಗಿ ನಿಗಿ ಉರಿಯುವ ಗುಣವುಳ್ಳ ರೂಪಕ- ಪ್ರತಿಮೆಗಳು, ಬಂಡುಕೋರ ಆಶಯಗಳು, ವಾಸ್ತವದ ಕ್ರೌರ್ಯಗಳು, ವಿಲಕ್ಷಣ ವ್ಯಂಗ್ಯ, ಸ್ಫೋಟಕ ಸತ್ವ ದಟ್ಟವಾಗಿ ಮೇಳೈಸಿವೆ. ಸರಸ್ವತಿಯ ನಗ್ನಪುತ್ಥಳಿ ಸುತ್ತ ಹೂ ಸುರಿದು/ಸ್ವಚ್ಛಂದ ತುಳಿಯುತ್ತಿದ್ದೇವೆ ಹೊಸ ಲಯ,/ ಭಯ, ಶಂಕೆ, ಬಿರುಗಾಳಿ ಹೊರೆಕಟ್ಟಿ ತಂದು/ ಲಿಲಾವು ಮಾಡುತ್ತೇವೆ/ ರಕ್ತದಂಗಡಿ ಹೊಕ್ಕು ಲೂಟಿ ಮಾಡುತ್ತೇವೆ ಪ್ರತಿಮೆಗಳ ಮುಂತಾದ ಸಾಲುಗಳು ಅಥವಾ ಶ್ರದ್ಧೆ ಬಚ್ಚಲಲ್ಲಿ ತೊಯ್ದ ಭ್ರಮಿಷ್ಟರು ನಾವಲ್ಲ/... ... .../ ಅಂಧೇರನಗರಿಯಾಳ್ವ ಅಪ್ರಾಮಾಣಿಕ ಗಣಕ್ಕೆ/ ಇದೋ ಎತ್ತಿದ್ದೇವೆ ಕಪ್ಪುಧ್ವಜದಂಥ ಸಾಲುಗಳು ಹಿಂಗಮಿರೆಯೆಂಬ ಕವಿಯೊಳಗೆ ಕುದಿಯುತ್ತಿದ್ದ ಅನುಭವ ಹಾಗೂ ಅದರ ಅಭಿವ್ಯಕ್ತಿಯ ಒತ್ತಡವನ್ನು ಸೂಚಿಸುತ್ತವೆ.
ಹದ್ದುಗಳ ಹಾಡುನವ್ಯತೆಯಿಂದ ಕಳಚಿಕೊಂಡು ಆನಂತರ ಎಂಬತ್ತರ ದಶಕದುದ್ದಕ್ಕೂ ಕನ್ನಡ ಕಾವ್ಯಲೋಕದಲ್ಲಿ ಸ್ವಲ್ಪ ವಾಚ್ಯವಾಗಿ ರಾರಾಜಿಸಿದ ದಲಿತ, ಬಂಡಾಯ ಇತ್ಯಾದಿ ನಾಮಾಂಕಿತ ಪ್ರವೃತ್ತಿಗಳ ಮುನ್ಸೂಚನೆಯಂಥ ಪದ್ಯಗಳನ್ನು ಒಳಗೊಂಡು ಪ್ರಕಟವಾಯಿತು. ಇಲ್ಲಿಯ ಪದ್ಯಗಳಲ್ಲಿನೆಲದ ಹಾಡುಎಂಬುದು ಮುಖ್ಯವಾದುದು. ಅಡಿಗರ ಭೂಮಿಗೀತಕ್ಕಿಂತ ತೀರ ಭಿನ್ನವಾದ ನೆಲೆಯ ದರ್ಶನವನ್ನು ಈ ಕವಿತೆ ಪ್ರಕಟಿಸಿತು. 70-80ರ ದಶಕಗಳಲ್ಲಿ ಹಿಂಗಮಿರೆಯವರು ಬಹಳಷ್ಟು ಕಾವ್ಯ ಹಾಗೂ ವಿಮರ್ಶೆಯ ಕೃಷಿಯನ್ನು ಮಾಡಿದರು. ಪುಣೆ ವಿಶ್ವವಿದ್ಯಾಲಯದಿಂದ ಅವರಿಗೆ ಡಾಕ್ಟರೇಟ್ ಪದವಿ ದೊರಕಿಸಿ ಕೊಟ್ಟ ಅವರ ಮಹಾಪ್ರಬಂಧಕನ್ನಡದಲ್ಲಿ ಶೋಕಕಾವ್ಯ1976ರಲ್ಲಿ ಮೈಸೂರು ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಯಿತು. ನವ್ಯಕಾವ್ಯ ವಿಮರ್ಶೆಯ ಕುರಿತಾದ ಇವರ ಕೃತಿಹೊಸಕಾವ್ಯ ಹೊಸದಿಕ್ಕು. ಹಿಂಗಮಿರೆಯವರ ಸಂಪಾದಿತ ಕಾವ್ಯಕೃತಿಗಳೂ ಹಲವಾರಿವೆ. ಅವರು ಸಂಪಾದಿಸಿದ ಕಾವ್ಯಕೃತಿಗಳಲ್ಲಿ ಬಹುಮುಖ್ಯವಾದುದು ಹೊಸ ಜನಾಂಗದ ಕವಿತೆಗಳು ಎಂಬ ಪ್ರಾತಿನಿಧಿಕ ಅಂಥಾಲಾಜಿ. ಇದು 1970ರಲ್ಲಿ ಪಿ.ಲಂಕೇಶ್ ಸಂಪಾದಿಸಿದ ಅಕ್ಷರ ಹೊಸ ಕಾವ್ಯಕ್ಕೆ ಪ್ರತ್ಯುತ್ತರವಾಗಿ ಪ್ರಕಟವಾದದ್ದು.
ಲಂಕೇಶ್ ಸಂಪಾದಿತ ಕೃತಿಯಲ್ಲಿ ಅಡಕವಾದ ಕವಿತೆಗಳು ಸಂಪಾದಕರ ವೈಯಕ್ತಿಕ ಇಷ್ಟಾನಿಷ್ಟಗಳ ನೆಲೆಯಲ್ಲಿ ಆಯ್ಕೆಯಾದ ಕವಿಗಳ ಕವಿತೆಗಳೆಂಬುದು ಸ್ಪಷ್ಟವಿತ್ತು. ಅಲ್ಲಿದ್ದುದು ಆಯಾ ಕವಿಗಳ ಪ್ರಾತಿನಿಧಿಕ ಕವಿತೆಗಳಲ್ಲ ಮತ್ತು ಉತ್ತರ ಕರ್ನಾಟಕ ಭಾಗದ ಹಲವು ಸಶಕ್ತ ಕವಿಗಳಿಗೆ ಅದರಲ್ಲಿ ಪ್ರಾತಿನಿಧ್ಯ ದೊರೆತಿಲ್ಲವೆಂಬ ಕಾರಣಕ್ಕೆ ಹಿಂಗಮಿರೆಯವರು ಪಿ.ಲಂಕೇಶ್ ಅಕಾರಣವಾಗಿಯೋ ಸಕಾರಣವಾಗಿಯೋ ಹೊರಗಿಟ್ಟ ಕವಿಗಳ ಪೈಕಿ 29 ಕವಿಗಳ ಪ್ರಾತಿನಿಧಿಕವೆನ್ನಬಹುದಾದ ಕವಿತೆಗಳನ್ನು ಅದರ ಮರುವರ್ಷವೇ (1971) ಪ್ರಕಟಿಸಿದರು.
ವರ್ತಮಾನದ ಕಾವ್ಯದ ಕುರಿತ ಸಂಪಾದಕರ ನಿರ್ದಿಷ್ಟ ಪ್ರಶ್ನೆಗಳಿಗೆ ಈ ಎಲ್ಲ ಕವಿಗಳ ಅನಿಸಿಕೆಗಳನ್ನು ಪ್ರತಿನಿಧಿಸುವ ಉತ್ತರಗಳು ಮತ್ತು ಸಂಪಾದಕೀಯ ಪ್ರಸ್ತಾವನೆಯೊಂದಿಗೆ ಪ್ರಕಟವಾದ ಈ ಸಂಕಲನದ ಕವಿಗಳಲ್ಲಿ ಹಲವರು ಇಂದಿಗೂ ಸೃಜನಶೀಲ ಜೀವಂತಿಕೆ ಉಳಿಸಿಕೊಂಡಿದ್ದಾರೆ.
ನಾಟಕ ಹಿಂಗಮಿರೆಯವರು ಸಾಕಷ್ಟು ಕೃಷಿಗೈದ ಇನ್ನೊಂದು ಕ್ಷೇತ್ರ. ತೀರ್ಪು, ನೀಲಾಂಜನೆ, ಅಹಲ್ಯೆ, ಸಂಗೊಳ್ಳಿ ರಾಯಣ್ಣ ಅವರ ರಂಗಕೃತಿಗಳು. ಕಲಘಟಗಿ ಪರಿಸರದ ಗ್ರಾಮೀಣರ ಬದುಕಿನಲ್ಲಿ ಬದಲಾವಣೆ ತರುವ ಕಾರ್ಯಗೈದ, ಕರ್ನಾಟಕ ಶಾಸನಸಭೆಗೂ ಆಯ್ಕೆಯಾಗಿದ್ದ ಫಾದರ್ ಜೇಕಬ್ ಅವರನ್ನು ಆದರ್ಶೀಕರಿಸಿದೀನದಲಿತರ ನಾಯಕಎಂಬ ನಾಟಕವನ್ನು ಬರೆದರು.
ರಷ್ಯನ್ ಭಾಷೆಯ ಕಾವ್ಯದ ಅನುವಾದ ಮತ್ತು ರೂಪಾಂತರ ಹಿಂಗಮಿರೆ ಅವರ ಇನ್ನೊಂದು ಕೊಡುಗೆ. ಅಕ್ಷರ ಪ್ರಕಾಶನದಿಂದ ಹಿಂಗಮಿರೆಯವರ ರಷ್ಯನ್ ಹೊಸಕವಿತೆಗಳು (1973) ಪ್ರಕಟವಾಯಿತು. ಪುಷ್ಕಿನ್ ಅವರು ಜಿಪ್ಸಿಗಳ ಕುರಿತು ಬರೆದ ಖಂಡಕಾವ್ಯವೊಂದನ್ನು ನಾಟಕಕ್ಕೆ ರೂಪಾಂತರಿಸಿಅಲೆಮಾರಿಗಳುಶೀರ್ಷಿಕೆಯಡಿ ಪ್ರಕಟಿಸಿದರು. ಅವರ ಸೃಜನಶೀಲ ತುಡಿತಗಳ ಶಿಖರಪ್ರಾಯ ಕೃತಿಯಾಗಿಬುದ್ಧ ಕಾವ್ಯದರ್ಶನಮಹಾಕಾವ್ಯ (2003) ಪ್ರಕಟವಾಯಿತು. ಹಿಂಗಮಿರೆ ಆ ಕಾವ್ಯದ ಉದ್ದೇಶವನ್ನು ಹೇಳಿದ್ದು ಹೀಗೆ:ಕಾಳು ತುಂಬಿ ಹೊಡೆಯೆತ್ತಿ ನಿಂತ ಹೊಳಿಸಾಲ ಭೂಮಿಯಂತೆ/ ತುಂಬಿ ಹರಿಯುವಾ ಕೃಷ್ಣೆ-ತುಂಗೆಯರ ತುಂಬು ಪಾತ್ರದಂತೆ/ ಬುದ್ಧಕಾವ್ಯ ರುಚಿ ಕಲ್ಲುಸಕ್ಕರೆಯ ಅಚ್ಚ ಹರಳಿನಂತೆ/ ಕೊರಡ ಕೊನರಿಸುವ ಭಾವ ಚಿಮ್ಮಿಸುವ ಜೀವಸತ್ವದಂತೆ..
ಸಾವಿರದೈನೂರು ಚತುಷ್ಪದಿಗಳಿಂದ ಕೂಡಿ ಅರವತ್ತು ಅಧ್ಯಾಯಗಳಲ್ಲಿ ಬುದ್ಧನ ಬದುಕು ಸಂದೇಶದ ದರ್ಶನ ಮಾಡಿಸುವ ಈ ಛಂದೋಬದ್ಧ ಕೃತಿ ಎಚ್.ಆರ್. ಅಮರನಾಥ ಗುರುತಿಸಿದಂತೆ- ಮತಪ್ರಚಾರದ ಆವೇಶವಿಲ್ಲದ, ತತ್ಕಾಲೀನತೆಯ ತೆವಲಿಲ್ಲದ, ಜಾನಪದೀಯ ಸತ್ವವನ್ನೂ, ಭಾವಗೀತಾತ್ಮಕತೆಯನ್ನೂ ಹೊಂದಿದ, ಪೌರಾಣಿಕತೆಯನ್ನು ಕಳಚಿ ಇತಿಹಾಸ ಪ್ರಜ್ಞೆಯಿಂದ ನಿರ್ವಹಿಸಲ್ಪಟ್ಟ ಕಾವ್ಯ.
ಹಿರಿಯ ಮಗಳ ಬದುಕಿನ ಏರುಪೇರುಗಳ ದುಃಖ, ಇದ್ದ ಎರಡೂ ಗಂಡುಮಕ್ಕಳ ಅಕಾಲಿಕ ಮರಣದಂಥ ದುಃಖ ದುಮ್ಮಾನಗಳ ನಡುವೆಯೂ ತಮ್ಮ ಕ್ರಿಯಾಶೀಲತೆಯನ್ನು ಸತತವಾಗಿ ಉಳಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆಯನ್ನು ಹಿಂಗಮಿರೆ ಅವರು ಕೊಟ್ಟಿದ್ದಾರೆ. ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.ಪುಷ್ಕಿನ್ ಕವಿತೆಗಳು ಕೃತಿಗೆ ಸೋವಿಯೆಟ್ ಲ್ಯಾಂಡ್ ನೆಹರೂ ಪಾರಿತೋಷಕ, ಹೊಸಕಾವ್ಯ ಹೊಸದಿಕ್ಕು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಮೈಸೂರು ವಿಶ್ವವಿದ್ಯಾಲಯ ಸ್ವರ್ಣಮಹೋತ್ಸವ ಪ್ರಶಸ್ತಿ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ ಹಿಂಗಮಿರೆಯವರ ಚಿಂತನೆ, ಬರವಣಿಗೆ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಎಷ್ಟರ ಮಟ್ಟದಲ್ಲಿ ಚರ್ಚೆಯಾಯಿತು ಎಂಬುದನ್ನು ನೋಡಿದರೆ ನಿರಾಶೆಯಾಗುತ್ತದೆ.
ಕನಿಷ್ಠ ಪಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ, ಸಾಹಿತ್ಯ ಅಕಾಡೆಮಿ-ಸಾಹಿತ್ಯ ಪರಿಷತ್ತಿನಂಥ ಸಾರ್ವಜನಿಕ ಸಂಸ್ಥೆಗಳು ಹಿಂಗಮಿರೆಯವರು ತಮ್ಮ ಹಣ ಹಾಕಿ ತಮ್ಮದೇ ಯುಗಧ್ವನಿ ಪ್ರಕಾಶನದಿಂದ ಹೊರತಂದ ಸಹಸ್ರಾರು ಪುಟಗಳಷ್ಟಿರುವ ಸಾಹಿತ್ಯವನ್ನು ಸಮಗ್ರವಾಗಿ ಪ್ರಕಟಿಸುವ, ಅವರ ಸಾಹಿತ್ಯದ ಕುರಿತ ವಿಚಾರ-ವಿಮರ್ಶೆಗೆ ಚಾಲನೆಕೊಡುವ, ಅವರ ಬುದ್ಧಕಾವ್ಯದರ್ಶನ ಮಹಾಕಾವ್ಯದ ಜನಪ್ರಿಯ ಆವೃತ್ತಿಯನ್ನು ಪ್ರಕಟಿಸಿ ವಿತರಿಸುವ ಕೆಲಸಗಳನ್ನು ಕರ್ತವ್ಯಪ್ರಜ್ಞೆಯಿಂದ ಮಾಡಬೇಕಿದೆ.
“ಋಜುಪಥವ ಹಿಡಿದೆ ಛಲ ಬಿಡದೆ
ರಾಜಿಯಾಗದೆ ನಿಜದ ನೇರಕೆ ನಡೆದೆ
ಬುದ್ಧದರ್ಶನಕೆ ಹುಲ್ಲು ಗೆಜ್ಜೆ ನಿನಾದಕೆ
ಮುಪ್ಪಿಲ್ಲ ಹಿಂಗಮಿರೆಯಿತ್ತ ಕಾವ್ಯಗೌರವಕೆ
ಮಣಿಹವಿದು ನೀ ಗೈದ ಸೃಷ್ಟಿ ಸಾಮರ್ಥ್ಯಕೆ ಕನ್ನಡದ ಖ್ಯಾತ ಕವಿ, ವಿಮರ್ಶಕ ಡಾ.ಬುದ್ದಣ್ಣ ಹಿಂಗಮಿರೆಯವರಿಗೆ ಅರ್ಪಿತವಾದ ಜನಪರ (2011, ಸಂ: ಶಿವಾನಂದ ಗಾಳಿ) ಎಂಬ ಅಭಿನಂದನಾ ಗ್ರಂಥದಲ್ಲಿ ಪ್ರೊ. ಹಂಪನಾ ಅವರು ಬರೆದ ಕವಿತೆಯೊಂದರ ಸಾಲುಗಳಿವು. ಹಿಂಗಮಿರೆಯವರ ವ್ಯಕ್ತಿತ್ವ ಮತ್ತು ಸಾಹಿತ್ಯಕ್ಕೆ ಸಮನಾಗಿಯೇ ಸಂದ ಹೃದಯಸ್ಪರ್ಶಿ ಶ್ರದ್ಧಾಂಜಲಿ ಇದು.
ಭೂತ ವರ್ತಮಾನಗಳ ನಿರಂತರ ಚಿಂತನೆ ವೈಚಾರಿಕ ಸಾಹಿತ್ಯದ ಕಡೆಗೆ ತುಡಿತ ಭವಿಷ್ಯ ನಿರ್ಮಾಣದಲ್ಲಿ ಜೀವ ಪಣವಿಟ್ಟು ದುಡಿದ ಶ್ರಮಿಕರ ಪ್ರತಿನಿಧಿ. ಬುದ್ಧ ಬಸವ ಮಾರ್ಕ್ಷರನ್ನು ಲೋಹಿಯಾರರನ್ನು ಓದಿಕೊಂಡು ಸಮಾಜವಾದ ಚಿಂತನೆಯಲ್ಲಿ ತಮ್ಮ ಸಾಹಿತ್ಯವನ್ನು ರಚಿಸಿ ಒಂದು ಸುಂದರ ವೈಚಾರಿಕ ಸಮಾಜವನ್ನು ಕಟ್ಟಿ ಕನ್ನಡದ ಋಣ ತೀರಿಸಿದ ದಿಟ್ಟ ಸಾಹಿತಿ ಆಗಸ್ಟ್ 17, 2012 ರಂದು ಧಾರವಾಡದಲ್ಲಿ ನಿಧನರಾದರು. ತಾವೂ ಬರೆದು ಉಳಿದವರನ್ನು ಬರೆಸಿ ಬೆಳೆಸಿ ನಿರಂತರ ಕನ್ನಡದ ಅಪ್ರತಿಮ ಸಾಹಿತಿಗೆ ನನ್ನ ನುಡಿ ನಮನಗಳು.


