ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಸಾಧನೆ ತೋರಿದ ೫ ಸಾವಿರ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಅಭೂತಪೂರ್ವ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ವಿಜಯಪುರದ ಕಿತ್ತೂರ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಇದೇ ದಿನಾಂಕ ೨೪ ರಂದು ನಡೆಯಲಿದೆ. ಇದೇ ಪ್ರಥಮ ಬಾರಿಗೆ ಅಪೂರ್ವ ರೀತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಡಾ.ಸುರೇಶ ಬಿರಾದಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತಾಹಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಜಿಲ್ಲಾಮಟ್ಟದಲ್ಲಿ ಈ ರೀತಿ ಸಮಾಜದ ವಿದ್ಯಾರ್ಥಿಗಳಿಗೆ ಸಾವಿರಾರು ಸಂಖ್ಯೆಯಲ್ಲೊ ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಕಾರ್ಯಕ್ರಮ ಇದಾಗಲಿದೆ ಎಂದರು.
ಪಂಚಮಸಾಲಿ ಸಮಾಜ ಕೃಷಿ ಆದಾರಿತ ಸಮಾಜ, ನಮ್ಮ ಸಮಾಜದಲ್ಲಿ ಬಹಳಷ್ಟು ಬಡವರೇ ಇದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ತೋರಲು ಅನುಕೂಲವಾಗಲು ಹಾಗೂ ಉಳಿದ ವಿದ್ಯಾರ್ಥಿಗಳಿಗೂ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ ಸಮಿತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುವ ಮೂಲಕ ಸಮಾಜದ ವಿದ್ಯಾರ್ಥಿಗಳು ಇನ್ನಷ್ಟೂ ಸಾಧನೆ ತೋರಲು ಸಹಾಯಕವಾಗಲಿದೆ, ಈ ತೆರನಾಗಿ ಅನೇಕ ಸಮಾಜ ಮುಖಿ ಕಾರ್ಯಚಟುವಟಿಕೆಗಳನ್ನು ಸಮಿತಿ ವತಿಯಿಂದ ಸಂಘಟಿಸಲಾಗುವುದು ಎಂದರು.
ಪಂಚಮಸಾಲಿ ಸಮಾಜದ ಮುಖಂಡರಾದ ಹಣಮಂತ ಸಾರವಾಡ, ಬಿ.ಎಲ್.ಬಿರಾದಾರ, ಅಶೋಕ ಬಿರಾದಾರ, ಬಸವರಾಜ ಕಳಸಗೊಂಡ, ಮುತ್ತು ಜಂಗಮಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.

