ಬಿಎಎಸ್ ಇಂಟರ್ ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕ ಯುವತಿಯರಿಗೆ ಸುವರ್ಣಾವಕಾಶ ಒದಗಿ ಬಂದಿದ್ದು, ಮೇ ೩ ರಂದು ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್ ನ್ಯಾಷನಲ್ ಶಾಲಾ ಆವರಣದಲ್ಲಿ, ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ. ಆಸಕ್ತರು ಈ ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಲೆಯ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಹೇಳಿದರು.
ಈ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಎಎಸ್ ಸ್ಟಾಫಿಂಗ್ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆಯುತ್ತಿರುವ ಈ ಉದ್ಯೋಗ ಮೇಳದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಅಸೆಂಬ್ಲಿ ವರ್ಕರ್ಸ್, ಪಿಕರ್ಸ್ & ಪ್ಯಾಕರ್ಸ್, ಹೆಲ್ಪರ್ಸ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಭಾಗವಹಿಸಬಹುದು.
ಬೆಂಗಳೂರು, ಕೋಲಾರ ಮತ್ತು ದೊಡ್ಡಬಳ್ಳಾಪುರ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳು ಲಭ್ಯವಿದ್ದು, ಆಯ್ಕೆಯಾದವರಿಗೆ ತಕ್ಷಣವೇ ನೇಮಕಾತಿ ಮಾಡಿಕೊಂಡು, ಪ್ರತಿ ತಿಂಗಳು ₹೧೬,೫೦೦ ರಿಂದ ₹೨೧,೦೦೦ ವರೆಗೆ ಸಂಬಳ, ಉಚಿತ ವಸತಿ, ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಮೇ ೩ರಂದು ಬೆಳಿಗ್ಗೆ ೧೦ ಗಂಟೆಯಿಂದ ನಡೆಯುವ ಈ ಜಾಬ್ ಮೇಳದಲ್ಲಿ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸುವಂತೆ ಸಲಹೆ ನೀಡಿದರು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಸುಮಂಗಲಾ ಬಿರಾದಾರ ಮಾತನಾಡಿ, ಈ ಭಾಗದಲ್ಲಿ ಸಾಕಷ್ಟು ವಿದ್ಯಾವಂತರು ತಮ್ಮ ಪದವಿ ಮುಗಿಸಿ ಸರಿಯಾದ ಉದ್ಯೋಗ ಸಿಗದೇ ಪರದಾಡುತ್ತಿರುವವರಿಗೆ ಅನುಕೂಲವಾಗಲಿ, ನಮ್ಮ ಭಾಗದಲ್ಲಿ ಯಾರೊಬ್ಬರೂ ನಿರುದ್ಯೋಗಿಗಳಾಗಿ ತಿರುಗಾಡಬಾರದು ಎಂಬ ಸದುದ್ದೇಶದಿಂದ ಈ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಆಸಕ್ತರು ಭಾಗಿಯಾಗಿ ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ ಎಂದರು.
ಈ ವೇಳೆ ಶಾಲೆಯ ಶೈಕ್ಷಣಿಕ ಸಂಯೋಜಕ ಸತೀಶ್ ವಾಲಿಕಾರ ಇದ್ದರು.

