ಚಡಚಣದ ಎಸ್.ಬಿ.ಐ. ಬ್ಯಾಂಕ್ ದರೋಡೆ ಪ್ರಕರಣ | ಶನಿವಾರದ ಬ್ಯಾಂಕ್ ವಹಿವಾಟು ಸ್ಥಗಿತ | ಚಿನ್ನ ಅಥವಾ ಹಣ ಈವರೆಗೆ ಮರಳಿ ನೀಡದ್ದಕ್ಕೆ ಸ್ಥಳೀಯರ ಆಕ್ರೋಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಕಳೆದ ವರ್ಷ ಸೆ.16ರಂದು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಸ್ಥಳೀಯ ಎಸ್.ಬಿ.ಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕನಲ್ಲಿ ಚಿನ್ನ ಅಡವು ಇಟ್ಟ ಗ್ರಾಹಕರಿಗೆ ಬ್ಯಾಂಕ್ ಇದುವರೆಗೆ ಯಾವದೇ ರೀತಿಯ ಚಿನ್ನ ಅಥವಾ ಹಣ ಮರಳಿ ನೀಡದೇ ಇರುವ ಹಿನ್ನಲೆಯಲ್ಲಿ ದಿನಂಪ್ರತಿ ಬ್ಯಾಂಕ್ಗೆ ಅಲೆದಾಟ ನಡೆಸಿ ರೋಷಹೋದ ಗ್ರಾಹಕರು, ಶನಿವಾರ ಬೆಳಗ್ಗೆ 11:30ರ ಸುಮಾರಿಗೆ ಬ್ಯಾಂಕ್ಗೆ ಮುತ್ತಿಗೆ ಹಾಕಿ ಬ್ಯಾಂಕ್ ಬಂದ್ ಮಾಡಿದ ಘಟನೆ ನಡೆದಿದೆ.
ಬೆಳಿಗ್ಗೆ ಬ್ಯಾಂಕ್‌ಗೆ ಬಂದ ಗ್ರಾಹಕ ಆರ್.ಕೆ.ಭೈರಗೊಂಡ ತಾವು ಅಡವು ಇಟ್ಟ ಚಿನ್ನದ ಕುರಿತು ಶಾಖಾ ವ್ಯವಸ್ಥಾಪಕರಿಗೆ ವಿಚಾರಿಸಿದಾಗ ವ್ಯವಸ್ಥಾಪಕ ಸರಿಯಾದ ಮಾಹಿತಿ ನೀಡದ ಕಾರಣ ಅಲ್ಲಿ ಇದ್ದ ಎಲ್ಲ ಗ್ರಾಹಕರು ಬ್ಯಾಂಕ್ ಬಂದ ಮಾಡಿಸಿ, ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕಾಗಮಿಸಿದ ಚಡಚಣ ಪಿ.ಎಸ್.ಐ. ಸೋಮೇಶ ಗೆಜ್ಜಿ, ಅಪರಾಧ ವಿಭಾಗ ಪಿ.ಎಸ್.ಐ. ಎನ್.ಜಿ. ಅಪನಾಯಕ ಹಾಗೂ ಸಿಬ್ಬಂದಿ ಗ್ರಾಹಕರನ್ನು ಸಮಾಧಾನಗೊಳಿಸಲು ಎಷ್ಟೇ ಪ್ರಯತ್ನಿಸಿದರೂ ಗ್ರಾಹಕರು ಅವರ ಮಾತಿಗೆ ಕಿವಿಗೊಡದೇ ತಾವು ಅಡವು ಇಟ್ಟ ಚಿನ್ನ ಕಳುವಾಗಿ 7 ತಿಂಗಳು ಕಳೆದರೂ ಇದುವರೆಗೂ ನಮಗೆ ಯಾವುದೇ ರೀತಿಯ ಹಣ ಅಥವಾ ಚಿನ್ನ ಮರಳಿ ದೊರೆತಿಲ್ಲ. ಇಲ್ಲಿಯವರೆಗೆ ಬ್ಯಾಂಕ್ನವರು ಹೇಳಿದ ಹಾಗೆ ನಾವು ಕೇಳಿದ್ದೇವೆ. ಆದರೆ ನಾವು ನಮ್ಮ ಕಷ್ಟ ಕಾಲಕ್ಕೆ ಎಂದು ಚಿನ್ನ ಅಡವು ಇಟ್ಟಿದ್ದೇವೆ. ಆದರೆ, ಬ್ಯಾಂಕ್ನವರು ದರೋಡೆ ಪ್ರಕರಣ ಸಂಬಂಧಿಸಿದ 1 ತಿಂಗಳಲ್ಲಿ ನಿಮಗೆ ನಿಮ್ಮ ಚಿನ್ನ ಅಥವಾ ಅದರ ಮೊತ್ತ ನೀಡುತ್ತೇವೆ ಎಂದು ಹೇಳಿದ್ದರು. ಈಗ ಶುಭ ಕಾರ್ಯಗಳು ನಡೆದಿದ್ದು ನಮಗೆ ಚಿನ್ನದ ಅವಶ್ಯಕತೆ ಇದೆ. ಇವಾಗ ಕೇಳಿದರೆ ಚಿನ್ನದ ನಿವ್ವಳ ತೂಕದ ಮೊತ್ತ ಹಾಗೂ ಅದಕ್ಕೆ 20% ಹೆಚ್ಚಿಗೆ ಹಣ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಈ ರೀತಿ ಹಣ ನೀಡಿದರೆ ನಮಗೆ ನಷ್ಟ ಉಂಟಾಗುತ್ತದೆ, ಸಧ್ಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರೂ.1 ಲಕ್ಷ 50 ಸಾವಿರ ಇದೆ. ಬ್ಯಾಂಕ್ನವರು ನಮಗೆ ಸ್ಥೂಲ ತೂಕ ಹಾಗೂ ಇಂದಿನ ಮಾರುಕಟ್ಟೆ ಬೆಲೆ ನೀಡಬೇಕು, ಇಲ್ಲವಾದರೆ ನಾವು ಅಡವು ಇಟ್ಟ ನಮ್ಮ ಚಿನ್ನವನ್ನು ನಮಗೆ ಮರಳಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬ್ಯಾಂಕ್ ಗ್ರಾಹಕರಾದ ಕಾಶೀನಾಥ ಪಾಟೀಲ, ಮಲ್ಲು ಮೇಲಮಳ, ಬಸವರಾಜ ಶರಣಗಾರ, ವಾಸೀಮ ಮುಲ್ಲಾ, ಗುರುಲಿಂಗ ದಂಧರಗಿ, ಆದೀಲ ಶೇಖ, ರಾಘವೇಂದ್ರ ಕುಲಕರ್ಣಿ, ಅಮೀನ ಟಪಾಲ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಹಕರು ಇದ್ದರು.
ಕಾಲಾವಕಾಶ ಬೇಡಿದ ಬ್ಯಾಂಕ್ ಅಧಿಕಾರಿಗಳು, ಒಪ್ಪದ ಗ್ರಾಹಕರು
ಬ್ಯಾಂಕ್‌ಗೆ ಆಗಮಿಸಿದ ಪ್ರಾದೇಶಿಕ ವ್ಯವಸ್ಥಾಪಕ ವಿಕಾಸ ಭಗೋತ್ರಾ, ವಿಜಯಪುರ ಶಾಖಾ ವ್ಯವಸ್ಥಾಪಕ ಪ್ರಲ್ಹಾದ ದೇಸಾಯಿ, ವೆಂಕಟೇಶ ಅವರುಗಳು ಗ್ರಾಹಕರಿಗೆ ನೀವು ಅಡವು ಇಟ್ಟ ಚಿನ್ನದ ನಿವ್ವಳ ತೂಕದ ಮೊತ್ತ ಹಾಗೂ ಅದಕ್ಕೆ 20% ಹೆಚ್ಚಿಗೆ ಹಣ ನೀಡುತ್ತೇವೆ ಎಂದು ಭರಸವೆ ನೀಡಿ ಅದಕ್ಕೆ ನಮಗೆ 1 ತಿಂಗಳ ಕಾಲಾವಕಾಶ ನೀಡಬೇಕು ಎಂದು ವಿನಂತಿಸಿಕೊಂಡರು. ಆದರೆ ಅವರ ವಿನಂತಿಗೆ ಬಗ್ಗದ ಗ್ರಾಹಕರು ನಾವು ನಿಮಗೆ ಈಗಾಗಲೇ 6 ತಿಂಗಳ ಕಾಲಾವಕಾಶ ನೀಡಿದ್ದೇವೆ ಆದರೆ ನೀವು ಇದುವರೆಗೂ ನಮಗೆ ಸ್ಪಂದಿಸುತ್ತಿಲ್ಲ ಇನ್ನು ಹೆಚ್ಚಿನ ಕಾಲಾವಕಾಶ ನೀಡಲು ನಮ್ಮಿಂದ ಸಾಧ್ಯವಿಲ್ಲ ಎಂದರು. ನಮಗೆ 4 ದಿನದೊಳಗಾಗಿ ನೀವು ಇಂದಿನ ಚಿನ್ನದ ಮಾರುಕಟ್ಟೆಯ ಬೆಲೆ ನೀಡಬೇಕು ಇಲ್ಲವಾದರೆ ನಾವು ಬ್ಯಾಂಕ್ಗೆ ಮುತ್ತಿಗೆ ಹಾಕಿ ಬ್ಯಾಂಕ್ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದರ ಬಗ್ಗೆ ನಿರ್ಧಾರ ಕೈಗೊಳ್ಳುವುದು ನಮ್ಮ ಕೈಯಲ್ಲಿ ಇಲ್ಲ. ನಾವು ನಮ್ಮ ಮುಖ್ಯ ಕಛೇರಿಯ ಅಧಿಕಾರಿಗಳಿಗೆ ವಿಚಾರಿಸಿ ನಿಮಗೆ ಸೂಕ್ತ ಹಣ ನೀಡಲು ನಮಗೆ ಕಾಲಾವಕಾಶ ಬೇಕು ಎಂದಾಗ ಅದಕ್ಕೆ ನೀವು ಬ್ಯಾಂಕಿನವರು ನಮಗೆ ಲಿಖಿತ ರೂಪದಲ್ಲಿ ನೀಡಿದರೆ ನಾವು ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಹೇಳಿದರು.
ಅದಕ್ಕೆ ಬ್ಯಾಂಕ್ ಅಧಿಕಾರಿಗಳು ಒಪ್ಪಿಕೊಂಡು ಲಿಖಿತ ರೂಪದಲ್ಲಿ 20 ದಿನಗಳ ಕಾಲಾವಕಾಶ ಕೇಳಿದ ನಂತರ ಗ್ರಾಹಕರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

