ಸಂಭ್ರಮದ ಶರಣಬಸವೇಶ್ವರ–ಸಿದ್ಧಲಿಂಗೇಶ್ವರರ ರಥೋತ್ಸವ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ತಾಲೂಕಿನ ಚಿಕ್ಕಪಡಸಲಗಿ ಗ್ರಾಮದ ಐತಿಹಾಸಿಕ ಕಮರಿಮಠದಲ್ಲಿ ಶರಣಬಸವೇಶ್ವರ ಹಾಗೂ ಸಿದ್ಧಲಿಂಗೇಶ್ವರ ಮಹಾರಾಜರ ವೈಭವಮಯ ರಥೋತ್ಸವ ಶುಕ್ರವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ಹಾಗೂ ಸಂಭ್ರಮ ಸಡಗರದ ನಡುವೆ ನೆರವೇರಿತು.
ಹಳಿಂಗಳಿಯ ಪೂಜ್ಯ ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಮತ್ತು ನೇತೃತ್ವದಲ್ಲಿ ನಡೆದ ಈ ಮಹೋತ್ಸವ ಗ್ರಾಮದಲ್ಲಿ ಧಾರ್ಮಿಕ ವಾತಾವರಣವನ್ನು ನಿರ್ಮಿಸಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ “ಶರಣಬಸವೇಶ್ವರ ಮಹಾರಾಜರಿಗೇ ಜಯ”, “ಸಿದ್ಧಲಿಂಗೇಶ್ವರ ಮಹಾರಾಜರಿಗೇ ಜಯ” ಎಂಬ ಘೋಷಣೆಗಳನ್ನು ಕೂಗಿ ಭಕ್ತಿ ಪರವಶತೆಯನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ಹೂವುಗಳು, ತೆಂಗಿನಕಾಯಿ, ಬಾಳೆಹಣ್ಣು, ಬಣ್ಣಬಣ್ಣದ ವಿದ್ಯುತ್ ದೀಪಗಳು ಹಾಗೂ ಸಾಂಪ್ರದಾಯಿಕ ಅಲಂಕಾರಗಳಿಂದ ಸಿಂಗರಿಸಲಾದ ರಥ ಭಕ್ತರ ಗಮನ ಸೆಳೆಯಿತು. ರಥದ ಸುತ್ತಲೂ ಅಲಂಕೃತ ದೀಪಾಲಂಕಾರ ಕಂಗೊಳಿಸುತ್ತಿದ್ದು, ಗ್ರಾಮೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.
ರಥೋತ್ಸವದ ಸಂದರ್ಭದಲ್ಲಿ ಭಕ್ತರು ಬೆಂಡು, ಬೆತ್ತಾಸು, ಕಾರಿಖ್ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ರಥಕ್ಕೆ ಅರ್ಪಿಸಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಚೀನಿಕೋಲು, ಕರಡಿ ಮಜಲು, ಡೊಳ್ಳು ಹಾಗೂ ವಿವಿಧ ಸಾಂಪ್ರದಾಯಿಕ ವಾದ್ಯಗಳ ನಾದ ಗ್ರಾಮದೆಲ್ಲೆಡೆ ಮೊಳಗಿದ್ದು, ಉತ್ಸವಕ್ಕೆ ವಿಶೇಷ ಮೆರುಗು ನೀಡಿತು. ಯುವಕರು ಉತ್ಸಾಹದಿಂದ ರಥ ಎಳೆಯುವ ಮೂಲಕ ಸೇವಾಭಾವ ಪ್ರದರ್ಶಿಸಿದರು. ಮಹಿಳೆಯರು ಮಂಗಳಾರತಿ ನೆರವೇರಿಸಿ ದೇವರ ಕೃಪೆಗೆ ಪ್ರಾರ್ಥಿಸಿದರು.
ಚಿಕ್ಕಪಡಸಲಗಿ, ಆಲಗೂರ, ಕವಟಗಿ, ಜನವಾಡ, ಬಿದರಿ, ನಾಗನೂರು, ಹಿರೇಪಡಸಲಗಿ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಗ್ರಾಮದಲ್ಲಿ ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ದಿನವಿಡೀ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.
ಇದಕ್ಕೂ ಮುನ್ನ ಬೆಳಿಗ್ಗೆ ಸಿದ್ಧಲಿಂಗೇಶ್ವರ ಮಹಾರಾಜರ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಶರಣಬಸವೇಶ್ವರ ಮಹಾರಾಜರ ತೊಟ್ಟಿಲು ತೂಗುವ (ನಾಮಕರಣ) ಕಾರ್ಯಕ್ರಮಗಳು ಭಕ್ತಿಪೂರ್ವಕವಾಗಿ ನಡೆದವು. ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜೆ, ಭಜನೆ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ನಡೆದವು. ಮಠದ ಪೂಜ್ಯರು ಹಾಗೂ ಭಕ್ತರು ಸೇರಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಾವತಪ್ಪ ಕಲ್ಯಾಣಿ, ಸುರೇಶ ದಾನಗೌಡ, ಮಹಾದೇವ ಕಲ್ಯಾಣಿ, ಲಕ್ಷ್ಮಣ ಕಲ್ಯಾಣಿ, ಸಿದ್ದು ಜಂಗಮಶೆಟ್ಟಿ, ಅಡಿವೇಪ್ಪ ಅಂಬಲಝೇರಿ, ಪ್ರಭು ಬೋದ್ಲಿ, ಜೈಪಾಲ್ ಹೊಸಮನಿ, ಸದಾಶಿವ ಕಲ್ಯಾಣಿ, ಮಲ್ಲಯ್ಯ ಹಿರೇಮಠ, ಹನಮಂತ ತೇಲಿˌ ಯಲ್ಲಾಲಿಂಗ ಅಡಿಹುಡಿˌ ಸದಾಶಿವ ಕಲ್ಯಾಣಿˌ ಸದಾಶಿವ ಅಡಿಹುಡಿˌ ಅಯ್ಯಪ್ಪ ಮಠಪತಿ, ಸಿದ್ಧಲಿಂಗ ಹಿರೇಮಠ, ಸಿದ್ರಾಮ ಇಟ್ಟಿ, ಶ್ರೀಶೈಲ ಪಟ್ಟಣಶೆಟ್ಟಿ, ಪ್ರವೀಣ ನಾವಿ ಸೇರಿದಂತೆ ಅನೇಕರು ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

