ವಿಜಯಪುರ ಜಿಲ್ಲೆಯ ವಾರ್ಷಿಕ ಸಾಲ ಯೋಜನೆ ಕೈಪಿಡಿ ಬಿಡುಗಡೆ | ೧೬೩೬೭.೮೩ ಕೋಟಿ ರೂ. ವಾರ್ಷಿಕ ಸಾಲ ಯೋಜನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕವಾಗಿರುವ ೨೦೨೬-೨೦೨೭ನೇ ಹಣಕಾಸು ವರ್ಷದ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಬುಧವಾರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು.
ಜಿಲ್ಲೆಯ ಅಗ್ರಣೀಯ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಈ ಸಾಲಿನ ವಾರ್ಷಿಕ ಸಾಲ ಯೋಜನೆ ಕೈಪಿಡಿ ಬಿಡುಗಡೆಗೊಳಿಸಿದರು.
ಪ್ರಸಕ್ತ ವರ್ಷದ ಸಾಲ ಯೋಜನೆಯ ೧೬೩೬೭.೮೩ ಕೋಟಿ ರೂ. ವಿತರಣೆಯ ಗುರಿಯನ್ನು ಹೊಂದಿದೆ. ಇದು ಕಳೆದ ವರ್ಷದ ವಾರ್ಷಿಕ ಸಾಲ ಯೋಜನೆಯ ಶೇಕಡಾ ೧೦.೯೦ ಪಟ್ಟು ಹೆಚ್ಚಿನ ಗುರಿಯಾಗಿದೆ. ಆದ್ಯತಾ ವಲಯಕ್ಕೆ: ಒಟ್ಟು ಯೋಜನೆ ಶೇ:೬೯.೫೯ ರಷ್ಟು ಅಂದರೆ ರೂ೧೧೩೮೯.೯೬ ಕೋಟಿ ಮೀಸಲಿಡಲಾಗಿದೆ. ಕೃಷಿ ವಲಯಕ್ಕೆ: ಒಟ್ಟು ಯೋಜನೆ ಶೇ: ೫೧.೪೬ ರಷ್ಟು ಅಂದರೆ ೮೪೨೨.೭೧ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉದ್ಯಮಿ ವಲಯಕ್ಕೆ: ಒಟ್ಟು ಯೋಜನೆ ಯೋಜನೆಯ ಶೇ:೧೬.೯೦ ಅಂದರೆ ರೂ೨೭೬೫.೪೮ ಕೋಟಿ ಮೀಸಲಿಡಲಾಗಿದೆ. ಶಿಕ್ಷಣ ಸಾಲ ರೂ ೫೩.೪೩ ಕೋಟಿ, ವಸತಿ ಸಾಲ ರೂ ೯೪.೦೭ ಕೋಟಿ ಮತ್ತು ಇತರೆ ಸಾಲ ರೂ ೨೮.೮೪ ಕೋಟಿ ಸಾಲದ ಗುರಿ ಹೊಂದಲಾಗಿದೆ.
ಈ ಸಮಯದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ಮಾತನಾಡಿ, ಬ್ಯಾಂಕುಗಳು ಸಕಾಲದಲ್ಲಿ ಮೇಲಾಧಾರ ರಹಿತ ಸಣ್ಣ ಸಾಲುಗಳನ್ನು ನಿರುದ್ಯೋಗಿಗಳಿಗೆ ಕೊಟ್ಟರೆ, ನಿರುದ್ಯೋಗ ನಿರ್ಮೂಲನೆಗೆ ಸಹಕಾರಿ ಯಾಗುವದು ಎಂದು ತಿಳಿಸಿದರು.
ಕಳೆದ ಸಾಲಿನ ವಾರ್ಷಿಕ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಅಗ್ರಣಿ ಬ್ಯಾಂಕ್ ಮುಖ್ಯ ಪ್ರಬಂಧಕರಾದ ಕೆ ಸಿದ್ದಯ್ಯ ಅವರು ವಿವರವಾಗಿ ತಿಳಿಸಿದರು. ಸಾಲ ಮತ್ತು ಠೇವಣಿಯ ಅನುಪಾತ ಶೇಕಡಾ ೧೦೬ ಆಗಿದ್ದು, ಅತ್ಯುತ್ತಮ ಗುರಿ ಸಾಧನೆ ಎಂದು ಅವರು ತಿಳಿಸಿದರು.
ಈ ವೇಳೆ ನಾಬಾರ್ಡ್ ಡಿಡಿ ಎಂ ಶ ವಿಕಾಸ ರಾಠೋಡ, ಕೆನರಾ ಬ್ಯಾಂಕ್ ವಿಭಾಗಿಯ ಪ್ರಬಂಧಕ ದೀಪಕ್ ಕುಮಾರ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅಶೋಕ ಸೋಂಗರಿ ಮುಖ್ಯ ವ್ಯವಸ್ಥಾಪಕ ವಿ ಬಿ ಕುಲಕರ್ಣಿ, ಎಸ್ ಬಿ ಐ ಮುಖ್ಯವಸ್ಥಾಪಕ ಹರೀಶ್ ನಾಯಕ ವಿನೋದ್ ಮಾದರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಂಧಕ ಅನಿಲ ಮಹಾoಕಾಳಿ, ಡಿಸಿಸಿ ಬ್ಯಾಂಕ್ ಪ್ರಬಂಧಕ ರಮೇಶ್ ಹಿಟ್ಟನಹಳ್ಳಿ, ಐಸಿಐಸಿಐ ಬ್ಯಾಂಕ್ ಪ್ರಬಂಧಕ ಶಿವಪುತ್ರ ನಿಂಬಾಳ, ಸೂರ್ಯೋದಯ ಎಸ್ಎಫ ಬಿ ಪ್ರಬಂಧಕ ಪ್ರದೀಪ್, ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಬಂಧಕ ರವೀಂದ್ರ ಅಂಗಡಿ ಸೇರಿದಂತೆ ವಿವಿಧ ಬ್ಯಾಂಕುಗಳ ಜಿಲ್ಲಾ ಸಂಯೋಜಕರು ಮತ್ತು ಲೈನ್ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

