ಉದಯರಶ್ಮಿ ದಿನಪತ್ರಿಕೆ
ಇಂಡಿ: ಅನಾಫೆಲಿಸ್ ಎನ್ನುವ ಹೆಣ್ಣು ಸೊಳ್ಳೆಯಿಂದ ಮಲೇರಿಯಾ ರೋಗ ಹರಡುತ್ತದೆ. ನಿಂತ ನೀರು ಸೊಳ್ಳೆಗಳ ತವರಿನಂತಿದ್ದು, ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಿ, ಮಲೇರಿಯಾ ನಿರ್ಮೂಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಇಲಾಖೆಯ ಮಾರ್ಗದರ್ಶನದಲ್ಲಿ ಮುಂಜಾಗೃತ ವಹಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ರಾಜೇಶ ಕೋಳೆಕರ ಹೇಳಿದರು.
ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲೇರಿಯಾ ತೀವ್ರವಾದ, ಕೆಲವೊಮ್ಮೆ ಮಾರಕವಾಗಬಹುದು. ಪ್ಲಾಸ್ಮೋಡಿಯಂ ಪರಾವಲಂಬಿಗಳು ಸಂಕೀರ್ಣ ಜೀವನ ಚಕ್ರವನ್ನು ಪಡೆದು, ಆವರ್ತಕ ಜ್ವರಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ರೋಗಿಗಳು ಚಿಕಿತ್ಸೆಯ ನಂತರ ಮಲೇರಿಯಾ ಲಕ್ಷಣಗಳಿಂದ ಬೇಗ ಚೇತರಿಸಿಕೊಳ್ಳುತ್ತಾರೆ. ಆದರೆ, ಚಿಕಿತ್ಸೆ ವಿಳಂಬವಾದರೆ ತೀವ್ರ ರಕ್ತಹೀನತೆ, ಸೆರೆಬ್ರಲ್, ಕೋಮಾ ಅಥವಾ ಸಾವೂ ಸಂಭವವಿದೆ ಎಂದು ತಿಳಿಸಿದರು.
ತಾಲೂಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಮಾತನಾಡಿ, ಜ್ವರದ ಲಕ್ಷಣಗಳಿದ್ದರೆ ರಕ್ತ ಪರೀಕ್ಷೆ ಮಾಡಿಸಿ, ಸಂಪೂರ್ಣ ಚಿಕಿತ್ಸೆ ಪಡೆಯಿರಿ. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸೊಳ್ಳೆ ಪರದೆ ಬಳಸಿ ಮತ್ತು ನಮ್ಮ ಇಲಾಖೆಯ ಸಹಯೋಗದಲ್ಲಿ ಅವಶ್ಯಕ ಮುಂಜಾಗೃತ ವಹಿಸಬೇಕು ಎಂದು ಹೇಳಿದರು.
ತಾಲೂಕಾ ಆರೋಗ್ಯ ಕಾರ್ಯಾಲಯದಿಂದ ಆರಂಭವಾಗಿ ನಗರದ ಮುಖ್ಯರಸ್ತೆಗಳ ಮೂಲಕ ತಲೂಕಾ ಸಾರ್ವಜನಿಕ ಆಸ್ಪತ್ರೆ ಆವರಣದವರೆಗೆ ಜಾಗೃತಿ ಜಾಥಾ ಜರುಗಿತು.
ವಿಶ್ವನಾಥ ತೆನಿಹಳ್ಳಿ, ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು, ತಾಲೂಕಾ ಆಶಾ ಮೆಂಟರ್, ನಮ್ಮ ಕ್ಲಿನಿಕ್ ನಿರೀಕ್ಷಣಾಧಿಕಾರಿಗಳು, ಶಾಂತೆಶ್ವರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

