ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ರಾಜ್ಯದ ಒಂದೂವರೆ ಲಕ್ಷ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಸದಸ್ಯತ್ವ ಹೊಂದಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಕೆಎಸ್ ಪಿಎಸ್ ಟಿಎ ) ೨೦೨೬-೩೧ರ ಅವಧಿಯ ಚುನಾವಣೆಗೆ ಸಂಬಂಧಿಸಿದ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಗಳು ಮಂಗಳವಾರ ಪ್ರಕಟಿಸಿದ್ದಾರೆ.
ಈ ಹಿಂದೆ ಏಪ್ರಿಲ್ ೧ಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಹೈಕೋರ್ಟ್ ಏಕಸದಸ್ಯ ಪೀಠದ ತಡೆಯಾಜ್ಞೆಯಿಂದಾಗಿ ಏ.೧೮ರಂದು ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಗೌರವಾನ್ವಿತ
ಮುಖ್ಯ ನ್ಯಾಯಮೂರ್ತಿಗಳಿದ್ದ ಹೈಕೋರ್ಟ್ ಪ್ರಧಾನ ವಿಭಾಗೀಯ ಪೀಠ ಮಂಗಳವಾರ ತಡೆಯಾಜ್ಞೆ ತೆರವುಗೊಳಿಸಿತ್ತು. ಇದರಿಂದ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದ ಹಂತದಿಂದಲೇ ಚುನಾವಣೆ ಪ್ರಕ್ರಿಯೆ ಪುನರಾರಂಭಗೊಂಡಿದೆ.
*ತಾಲ್ಲೂಕು/ ಯೋಜನಾ ಸಂಘಗಳ ಕಾರ್ಯಕಾರಿ ಸಮಿತಿಗೆ ಚುನಾವಣೆ;
ತಾಲ್ಲೂಕು/ ಯೋಜನಾ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ಸಾತಿ, ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ಪ್ರಕಟಣೆವರೆಗೂ ಚುನಾವಣಾ ಪ್ರಕ್ರಿಯೆಗಳು ಮುಗಿದು, ನಿಗದಿತ ಸ್ಥಾನದಷ್ಟೇ ಅಭ್ಯರ್ಥಿಗಳು ಚುನಾಚಣೆ ಕಣದಲ್ಲಿ ಉಳಿದರೆ ಅವಿರೋಧ ಆಯ್ಕೆಯ ಫಲಿತಾಂಶ ಘೋಷಣೆಯಾಗಿತ್ತು. ನಿಗದಿತ ಸ್ಥಾನಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದ ಕಡೆ ಮತದಾನ ಜರುಗಿಸಲು ಒಂದು ದಿನ ಬಾಕಿ ಉಳಿದು ಅಭ್ಯರ್ಥಿಗಳ ಚುನಾವಣೆ ಪ್ರಚಾರ ಚಾಲ್ತಿಯಲ್ಲಿತ್ತು. ಈಗ ಹಂತದಿಂದಲೇ ಚುನಾವಣೆ ಪ್ರಕ್ರಿಯೆ ಪುನಃ ಆರಂಭಗೊಳ್ಳಲಿವೆ.
ಅಗತ್ಯ ಇರುವ ಕಡೆಗಳಲ್ಲಿ ಮೇ ೧ಕ್ಕೆ ಬೆಳಗ್ಗೆ ೮:೩೦ ರಿಂದ ಸಂಜೆ ೪:೩೦ರವರೆಗೆ ಮತದಾನ ನಡೆದು ಆ ಬಳಿಕ ಅದೇ ದಿನ ರಾತ್ರಿ ೬.೩೦ ರಿಂದ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ತಾಲ್ಲೂಕು/ಯೋಜನಾ/ಜಿಲ್ಲಾ/ ರಾಜ್ಯ ಘಟಕಗಳ ಚುನಾವಣೆ;
ಈ ಮೂರು ಹಂತದ ಪದಾಧಿಕಾರಿಗಳ ಚುನಾವಣೆ ಪ್ರಕ್ರಿಯೆ ಏಕಕಾಲದಲ್ಲಿ ನಡೆಯಲಿದೆ. ಚುನಾವಣೆಗೆ ಅರ್ಹ ಮತದಾರರ ಯಾದಿ ಮೇ ೪ ಕ್ಕೆ ಪ್ರಕಟಗೊಳ್ಳಲಿದೆ.
ಮೇ ೪ ಮತ್ತು ೫ ಕ್ಕೆ ನಾಮಪತ್ರಗಳ ವಿತರಣೆ ಮತ್ತು ಸ್ವೀಕಾರ ನಡೆಯಲಿದ್ದು, ಅದೇ ದಿನ ಸಂಜೆ ೫.೩೦ ನಡೆದು ಕ್ರಮಬದ್ಧ ನಾಮ ಪತ್ರ ಗಳ ಯಾದಿ ಪ್ರಕಟಿಸಲಾಗುತ್ತದೆ.
ಮೇ. ೬ ಕ್ಕೆ ಸಂಜೆ ೫.೩೦ ರವರೆಗೆ ನಾಮಪತ್ರ ಹಿಂಪಡೆಯಲು ಸಮಯವಿದೆ.
ಮೇ ೧೦ಕ್ಕೆ ಬೆಳಗ್ಗೆ ೯ ರಿಂದ ಮಧ್ಯಾಹ್ನ ೧೨.೩೦ರ ತನಕ ಚುನಾವಣೆ, ಮಧ್ಯಾಹ್ನ ೧.೩೦ ರ ನಂತರ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ರಾಜ್ಯ ಚುನಾವಣಾಧಿಕಾರಿ ಮೆಹೆಬೂಬ್ ಪಾಷಾ ಮೂಲಿಮನಿ ತಿಳಿಸಿದ್ದಾರೆ.
