ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಕೊಡುಗೆ ಅವಶ್ಯಕ. ಆ ನಿಟ್ಟಿನಲ್ಲಿ ಇಂತಹ ಎನ್ ಎಸ್ ಎಸ್ ಶಿಬಿರದಲ್ಲಿ ಭಾಗವಹಿಸಿ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ನಿವೃತ್ತ ಪ್ರಾಚಾರ್ಯೆ ಡಾ. ಆರ್.ಎಂ. ಮಿರ್ಧೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ೨ ರ ಸಹಯೋಗದಲ್ಲಿ ಏ.೨೭ ರಂದು ದತ್ತು ಗ್ರಾಮ ಅರಕೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ, ನಿಸ್ವಾರ್ಥ ಸೇವೆ ಮನೋಭಾವ ಅದು ಎನ್ ಎಸ್ ಎಸ್, ಇಂತಹ ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ನಿಮ್ಮ ವ್ಯಕ್ತಿತ್ವ,ಸ್ವಯಂ ಸೇವಾ ಮನೋಭಾವ ವಿಕಸನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಅರಕೇರಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಜಿ. ಮುಲ್ಲಾ ಮಾತನಾಡಿ, ಎನ್ ಎಸ್ ಎಸ್ ಶಿಬಿರದಾದ್ಯಂತ ಸ್ವಯಂ ಸೇವಕರ ಶಿಸ್ತು, ಸಾಮಾಜಿಕ ಜವಾಬ್ದಾರಿಗಳು ಮತ್ತು ಸಕ್ರಿಯ ಭಾಗವಹಿಸುವಿಕೆ ಅಲ್ಲದೆ ಅವರ ಪ್ರಾಮಾಣಿಕ ಪ್ರಯತ್ನಗಳು ಮತ್ತು ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಮೀನಾಕ್ಷಿ ಬಿ. ಪಾಟೀಲ ಮಾತನಾಡಿ, ನಿಜವಾದ ಸ್ವಯಂ ಸೇವಾ ಮನೋಭಾವ ಎಂದರೆ ಅದು ರಾಷ್ಟ್ರೀಯ ಸೇವಾ ಯೋಜನೆ, ಅಂತಹ ಶಿಬಿರದಲ್ಲಿ ಸ್ವಯಂ ಸೇವಕರು ನಿಸ್ವಾರ್ಥ ಸೇವೆಯ ಕಾರ್ಯನಿರ್ವಹಿಸಿದ್ದೀರಿ. ಶಿಬಿರದ ಸಮಯದಲ್ಲಿನ ಸೇವಾ ಮನೋಭಾವ, ನಾಯಕತ್ವ ಗುಣ ಮತ್ತು ಸಹಾನುಭೂತಿಯ ಮೌಲ್ಯವನ್ನು ಎಂದೆಂದಿಗೂ ಹಸಿರಾಗಿರುವಂತೆ ಪ್ರೇರೇಪಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಆಯೋಜಿಸಿ ೭ ದಿನಗಳ ಸಂಪೂರ್ಣ ವರದಿವಾಚನ ಮಾಡಲಾಯಿತು.
ಶಿಬಿರದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಿಸಿದ ಸ್ವಯಂಸೇವಕರನ್ನು ಟ್ರೋಫಿ ಮತ್ತು ಪ್ರಶಸ್ತಿ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಅದೇ ರೀತಿಯಾಗಿ ವಿದ್ಯಾರ್ಥಿಗಳು ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಘಟಕ-೧ ಮತ್ತು ೨ ರ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಿಲನ್ ರಾಠೋಡ್, ಡಾ.ತರನ್ನುಮ್ ಜಬೀನ್ ಖಾನ್, ಡಾ. ಕೆ. ಮಹೇಶ್ ಕುಮಾರ್, ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ , ಸ್ವಯಂಸೇವಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

