ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರದ ವಿವಿಧ ಯೋಜನೆಗಳಡಿ ಹಂಚಲ್ಪಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಮಾಡಿರುವ ಸಿಂದಗಿ ತಹಸೀಲ್ದಾರರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ಹಾಗೂ ಟಾಟಾ ಏಸ್ ವಾಹನ ವಶಪಡಿಸಿಕೊಂಡಿದ್ದಾರೆ.
ಸಿಂದಗಿ ಪಟ್ಟಣದ ಸೋಂಪುರ ರಸ್ತೆಯಲ್ಲಿ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು ೧೨೮೦ ಕೆಜಿ ಅಕ್ಕಿ ಹಾಗೂ ವಾಹನ ವಶಪಡಿಸಿಕೊಂಡು ವಾಹನ ಮಾಲೀಕರ ವಿರುದ್ಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾಳಿಯಲ್ಲಿ ಸಿಂದಗಿ ತಹಸೀಲ್ದಾರ್ ಕರೆಪ್ಪ ಎಸ್. ಬೆಳ್ಳಿ, ಆಹಾರ ನಿರೀಕ್ಷಕರಾದ ವಿದ್ಯಾ ಹಿಪ್ಪರಗಿ, ಪ್ರಭುಗೌಡ ಬಿರಾದಾರ ಪಾಲ್ಗೊಂಡಿದ್ದರು ಎಂದು ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
