ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ: ಕರ್ನಾಟಕ ವಿಶ್ವವಿದ್ಯಾಲಯದ ೭೫ನೇ ಘಟಿಕೋತ್ಸವ ಸಮಾರಂಭವು ಗದಗ ನಗರದ ಗಾಂಧಿ ಭವನದಲ್ಲಿ ಭವ್ಯವಾಗಿ ನಡೆಯಿತು.
ಈ ಸಂದರ್ಭದಲ್ಲಿ ನಗರದ ಕುಮಾರಿ ಅಕ್ಷತಾ ಶಾಂತಕುಮಾರ ಭಜಂತ್ರಿ ಅವರು ಎಂ.ಎಡ್ (ಶಿಕ್ಷಣ) ಸ್ನಾತಕೋತ್ತರ ಪದವಿಯಲ್ಲಿ ಉನ್ನತ ಸ್ಥಾನ ಗಳಿಸಿದ ಸಾಧನೆಗೆ “ಚಿನ್ನದ ಪದಕ” ಪಡೆದು ವಿಶೇಷ ಗೌರವಕ್ಕೆ ಪಾತ್ರರಾದರು.
ಸದ್ಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಯೇ ಪಿ.ಹೆಚ್.ಡಿ ಅಧ್ಯಯನ ಮಾಡುತ್ತಿರುವ ಅಕ್ಷತಾ ಅವರು ತಮ್ಮ ಶೈಕ್ಷಣಿಕ ಸಾಧನೆಯ ಮೂಲಕ ಗಮನಸೆಳೆದಿದ್ದಾರೆ. ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಘನವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಪದಕವನ್ನು ಪ್ರದಾನಿಸಿದರು.
ಈ ವೇಳೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಡಾ. ಎಂ.ಸಿ. ಸುಧಾಕರ್, ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಕ್ಷತಾ ಭಜಂತ್ರಿಯ ಈ ಸಾಧನೆಗೆ ಕುಟುಂಬಸ್ಥರು, ಶಿಕ್ಷಕರು ಹಾಗೂ ಸ್ನೇಹಿತರಿಂದ ಹರ್ಷ ವ್ಯಕ್ತವಾಗಿದೆ.
ಅಕ್ಷತಾ ಅವರ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

