ವಿಜಯಪುರದಲ್ಲಿ ನಡೆದ ಮಹಿಳಾ ಕಲ್ಯಾಣ ವಿಭಾಗದ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆನಂದ.ಕೆ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಬಾಲ್ಯವಿವಾಹ ಎಂಬ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಹಿಳಾ ಕಲ್ಯಾಣ ವಿಭಾಗದ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾವಲು ಸಮಿತಿ ಪ್ರತಿಮಾಹೆ ಸಭೆ ನಡೆಸಿ ಎಂದು ಈಗಾಗಲೇ ಈ ಹಿಂದಿನ ಸಭೆಯಲ್ಲಿ ನಿರಂತರವಾಗಿ ಸೂಚಿಸಲಾಗಿದೆ. ಗ್ರಾಮ ಪಂಚಾಯತಿ ಕಾವಲು ಸಮಿತಿ ಚರ್ಚಿಸಿರುವ ವಿಷಯ ಪ್ರಚಾರ ಕೈಗೊಳ್ಳಬೇಕು. ಜನರಿಗೆ ಗೊತ್ತಾಗಬೇಕು. ಇದರಿಂದ ಇದರ ಕಾಯ್ದೆಯ ಅರಿವು ಜನರಿಗೆ ಮೂಡಲಿದೆ ಎಂದರು.
ಜಿಂಗಲ್ಸ್ ಮೂಲಕ ಪ್ರಚಾರ ಮಾಡಬೇಕು. ಗ್ರಾಮೀಣ ಹಾಗೂ ಸ್ಥಳೀಯ ಸಂಸ್ಥೆಗಳ ಸ್ವಚ್ಛವಾಹಿನಿ ಮೂಲಕ ತಿಳಿಹೇಳಬೇಕು. ಬಾಲ್ಯ ವಿವಾಹ ಇದೊಂದು ಸಾಮಾಜಿಕ ಪಿಡುಗಾಗಿದ್ದು, ಮಕ್ಕಳ ಬಾಲ್ಯ ಸುಂದರಗೊಳ್ಳಲು ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಬಾಲ್ಯ ವಿವಾಹ ತಡೆಯಬೇಕು ಎಂದರು.
ಮಾರ್ಚ್-೨೦೨೬ರ ಅವಧಿಯಲ್ಲಿ ಜಿಲ್ಲೆಯಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು ೧೩ ಬಾಲ್ಯವಿವಾಹಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪ ವಿಭಾಗಾಧಿಕಾರಿಗಳಾದ ಚಿದಾನಂದ ಗುರುಸ್ವಾಮಿ, ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನ ಕುಸುನಾಳ, ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂ ಬಾಬಾ ಮುದ್ದೇಬಿಹಾಳ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಪರಸುರಾಮ ಹಿಟ್ನಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಮಂಟೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಕಾಳೆ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ಸುರಕ್ಷತೆ ಮತ್ತು ಸಬಲೀಕರಣಕ್ಕೆ ಆದ್ಯತೆ
ವಿಜಯಪುರ ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದ್ದು, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಶಾದಾಯಕ ಪ್ರಗತಿ ಕಂಡುಬಂದಿದೆ. ಮಾರ್ಚ್ ೨೦೨೬ರ ಅಂತ್ಯಕ್ಕೆ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಒಟ್ಟು ೧೮೪ ಪ್ರಕರಣಗಳ ಪೈಕಿ ಬಹುಪಾಲು ಪ್ರಕರಣಗಳಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿದೆ.

