ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದ ಮಾರ್ಗವಾಗಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಕಾಲುವೆಗೆ ಪ್ರತಿದಿನ ೨೪೦೦ ಕ್ಯುಸೆಕ್‌ನಂತೆ ನೀರು ಹರಿಸುತ್ತಿರುವದರಿಂದ ಈ ಭಾಗದ ಅಂತರ್ಜಲಮಟ್ಟ ಹೆಚ್ಚಾಗುವ ಮೂಲಕ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ನಿವಾರಣೆಯಾದಂತಾಗಿದೆ.
ಕಳೆದ ಒಂದು ವಾರದಿಂದ ಜಿಎಲ್ಬಿಸಿ ಕಾಲುವೆಯ ನೀರು ಈ ಭಾಗದ ಎರಡು ಬ್ರಹತ್ ಕೆರೆ ಹಾಗೂ ಬಾಂದಾರಗಳಿಗೆ ಹರಿಸಿ ತುಂಬಿಸಲಾಗಿದ್ದರಿಂದ ಬಾವಿ ಬರ‍್ವೆಲ್‌ಗಳ ಅಂತರ್ಜಲಮಟ್ಟ ಹೆಚ್ಚಿದ್ದು ಈ ಮೊದಲು ಕೇವಲ ಅರ್ಧಘಂಟೆ ಮಾತ್ರ ನೀರು ಪೋರೈಸುತಿದ್ದ ಬರ‍್ವೆಲ್‌ಗಳೂ ಈಗ ಸತತವಾಗಿ ನೀರು ಕೊಡುತ್ತಿವೆಯಲ್ಲದೇ ರೈತರ ಹೊಲಗಳಲ್ಲಿರುವ ಭಾವಿಗಳ ಜಲಮಟ್ಟವೂ ಗಣನೀಯವಾಗಿ ಹೆಚ್ಚಿದ್ದರಿಂದ ರೈತರು ಹರ್ಷಗೊಂಡು ತಮ್ಮ ಹೊಲ ಗದ್ದೆಗಳನ್ನು ಹದಗೊಳಿಸುವ ಮೂಲಕ ಬಿತ್ತನೆ ಕಾರ್ಯಕ್ಕೆ ಅಣಿಯಾಗಿದ್ದಾರೆ.
ಹನ್ನೊಂದು ದಿನಗಳ ಕಾಲ ಹರಿಸಲಾಗುತ್ತಿರುವ ಈ ಕಾಲುವೆ ನೀರು ಇನ್ನು ಕೇವಲ ನಾಲ್ಕು ದಿನಮಾತ್ರ ಹರಿಯಲಿದ್ದು ತೇರದಾಳ ಮತಕ್ಷೇತ್ರ ವ್ಯಾಪ್ತಿಯ ರೈತರು ಸಾರ್ವಜನಿಕರು ತಮ್ಮ ಭಾಗದ ಕೆರೆ ಬಾಂದಾರಗಳನ್ನು ತುಂಬಿಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಸಿದ್ದು ಸವದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

