ರಸ್ತೆಗಳಲ್ಲಿ ಮಧ್ಯಾಹ್ನ ಜನಸಂಚಾರ ವಿರಳ | ಬತ್ತಿದ ಕೊಳವೆ ಬಾವಿಗಳು | ಹೆಚ್ಚಾದ ತಂಪು ಪಾನೀಯಗಳ ಬೇಡಿಕೆ | ಗೃಹಜ್ಯೋತಿ ಪರಿಮಿತಿ ದಾಟುತ್ತಿರುವ ಕರೆಂಟ್ ಬಿಲ್
ವರದಿ: ಸಿದ್ರಾಮ್ ಎಮ್ ಇಟ್ಟಿ
ಬಾಗಲಕೋಟೆ: ಏಪ್ರೀಲ್ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ಕೋಟೆನಾಡಿನಲ್ಲಿ ತಾಪಮಾನ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಮನೆಯೊಳಗೆ ಎಸಿ, ಫ್ಯಾನು ಏನೇ ಇದ್ದರೂ ಸೆಕೆ ತಾಳಲಾಗುತ್ತಿಲ್ಲ. ಮಧ್ಯಾಹ್ನವಂತೂ ಹೊರ ಬರಲು ಸಾಧ್ಯವಾಗುವುದೇ ಇಲ್ಲ. ಮೇಲ್ಛಾವಣಿಗೆ ನೀರು ಹಾಯಿಸಿ ಮನೆಯನ್ನು ತಣ್ಣಗೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಜಮೀನಿನಲ್ಲಿರುವ ಬೆಳೆಗಳೂ ಒಣಗುತ್ತಿದ್ದು, ನೀರಿಲ್ಲದೇ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಕೋಟೆನಾಡಿನಲ್ಲಿ ರಣಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದಾರೆ. ಜಿಲ್ಲೆಯ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದ್ದರೂ ಜಮಖಂಡಿˌ ಮುಧೋಳˌ ಬೀಳಗಿˌ ರಬಕವಿ-ಬನಹಟ್ಟಿ ಸೇರಿದಂತೆ ಅನೇಕ ತಾಲೂಕಿನಲ್ಲಿ ಗಟ್ಟಿ ಮಳೆಯಾಗದೆ ತಾಪಮಾನ ಇನ್ನಷ್ಟು ಅಧಿಕವಾಗಿದೆ.
ಸುಡು ಬೇಸಿಗೆಯಲ್ಲಿ ಬೆಳೆ ರಕ್ಷಣೆಗೆ ಕೊಳವೆಬಾವಿ ಪಂಪ್‌ಸೆಟ್‌ಗಳಲ್ಲಿ ಬರುವ ಸಣ್ಣ ಪ್ರಮಾಣದ ನೀರಿನಿಂದ ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಪರದಾಟ ನಡೆಸಿದ್ದಾರೆ. ಬಿಸಿಲು ತಾಪ ಹೆಚ್ಚಾಗಿದ್ದು, ಬೆಳಗ್ಗೆ 11 ರ ನಂತರ ಡಾಂಬರ್ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಮಧ್ಯಾಹ್ನದ ಉರಿ ಬಿಸಿಲಲ್ಲಿ ಸಂಚರಿಸುವ ಪ್ರಯಾಣಿಕರಿಗೆ ರಸ್ತೆಯ ಬಿಸಿ ಸುಡುವ ಅನುಭವ ನೀಡುತ್ತಿದೆ.
ಮನೆಗಳಲ್ಲಿ ಹಗಲು, ರಾತ್ರಿ ಫ್ಯಾನ್‌ಗಳು ನಿರಂತರವಾಗಿ ಓಡುತ್ತಿದ್ದರೂ ತಂಪು ನೀಡಲು ಸಫಲವಾಗುತ್ತಿಲ್ಲ. ಫ್ಯಾನ್‌ಗಳ ನಿರಂತರ ಬಳಕೆಯಿಂದ ಗೃಹಜ್ಯೋತಿ ಪರಿಮಿತಿ (ಲಿಮಿಚ್) ದಾಟಿ, ದುಬಾರಿ ಕರೆಂಟ್ ಬಿಲ್ ಭರಿಸುವಂತಾಗಿದೆ. ಜನ, ಆರ್‌ಸಿಸಿ ಮನೆಯವರುˌ ಹಾಗೂ ಪತ್ರಾಸ್ ಗಳಿಂದ ನಿರ್ಮಿಸಿಕೊಂಡ ಮನೆಗಳ ನಿವಾಸಿಗಳು, ಬಿಸಿಲ ತಾಪ ತಡೆಗಟ್ಟುವ ಯತ್ನ ನಡೆಸಿದ್ದಾರೆ. ಮಧ್ಯಾಹ್ನ ಮನೆಯಿಂದ ಹೊರಗಡೆ ಬರಲು ಜನ ಹಿಂಜರಿಯುವಂತಾಗಿದೆ. ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿ ಬಿಕೋ ಎನ್ನುತ್ತಿದೆ. ವಿಪರೀತ ದಗೆಯ ಕಾರಣ ತಂಪು ಪಾನೀಯ, ಎಳನೀರು, ಕಲ್ಲಂಗಡಿ, ಹಣ್ಣಿನ ಜ್ಯೂಸ್, ಮಜ್ಜಿಗೆ, ಮೊಸರು ಸೇವನೆಗೆ ಜನ ಮೊರೆ ಹೋಗಿದ್ದಾರೆ. ಶಾಲಾ, ಕಾಲೇಜಿಗೆ ರಜೆ ಹಿನ್ನೆಲೆಯಲ್ಲಿ ಇಲ್ಲಿನ ನದಿ, ಹಳ್ಳˌ ಕೋಳ್ಳಗಳಿಗೆ ಇಳಿದು ನೀರಿನಾಟ ಆಡುವ ಮೂಲಕ ದೇಹ ತಂಪಾಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಗುಡುಗು, ಸಿಡಿಲಿನ ಆರ್ಭಟ:
ಕಬ್ಬಿನದ ಪತ್ರಾಸ್ ಮನೆ ಚಾವಣಿ ಹೊಂದಿರುವ ನಿವಾಸಿಗಳ ಪಾಡಂತೂ ಬೇಸಿಗೆ ಬಿಸಿಲಲ್ಲಿ ಹೇಳತೀರದಾಗಿದೆ. ಚಾವಣಿ ಮೇಲೆ ತೆಂಗಿನ ಗರಿಗಳನ್ನು ಹಾಕಿ ಬೆಳಗ್ಗೆ, ಸಂಜೆ ಗರಿಗಳಿಗೆ ನೀರು ಸುರಿದು ತಂಪನ್ನಾಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವವರು ಮುಂಜಾನೆ ಬೇಗ ಕೆಲಸ ಪ್ರಾರಂಭಿಸಿ 11ಕ್ಕೆ ಮನೆ ಸೇರಿಕೊಳ್ಳುತ್ತಿದ್ದಾರೆ. ಎಲ್ಲರ ಚಿತ್ತವೂ ಆಗಸದತ್ತ ನೆಟ್ಟಿದೆ. ನೆಲ ತೇವವಾಗಲು ಸಾಕಾಗುವಷ್ಟು ಆಗೊಮ್ಮೆ ಈಗೊಮ್ಮೆ ಬೀಳುತ್ತಿರುವ ಮಳೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಬೀಳುವ ಅಲ್ಪ ಸ್ವಲ್ಪ ಮಳೆಗೆ ಬಾನಂಗಳದಲ್ಲಿ ಸಿಡಿಲು ಗುಡುಗಿನ ಆರ್ಭಟ ಜೋರಾಗಿದ್ದು ಜನ ಬೆಚ್ಚಿ ಬೀಳುವಂತೆ ಮಾಡಿದೆ.

ಎಳನೀರು ದರ ದುಬಾರಿ
ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕಿನ ಸುತ್ತ ವ್ಯಾಪಕ ನುಸಿರೋಗದ ಬಾಧೆಯಿಂದ ಬೇಸಿಗೆಯಲ್ಲಿ ತೆಂಗಿನ ಕಾಯಿ ದರ ಗಗನಕ್ಕೇರಿದೆ. ಹೀಗಾಗಿ ಎಳನೀರು ದರ ಕೂಡ ದುಪ್ಪಟ್ಟಾಗಿದೆ. ಕಳೆದ ಬೇಸಿಗೆಯಲ್ಲಿ 20 ರೂ.ನಿಂದ 30 ರೂ. ಧಾರಣೆಯಿದ್ದ ಎಳನೀರು, ಪ್ರಸ್ತುತ 50 ರೂ.ನಿಂದ 60 ರೂ.ಗೆ ದಾಟಿದೆ.
ಬೇಸಿಗೆ ಬಿಸಿಯೂಟ ವಂಚಿತ
ಪ್ರತಿ ಬೇಸಿಗೆ ಶಾಲಾ ರಜಾ ದಿನಗಳಲ್ಲಿ ಬಡಮಕ್ಕಳು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸರಕಾರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಿತ್ತು. ಈ ವರ್ಷ ಬಿಸಿಯೂಟಕ್ಕೆ ವ್ಯವಸ್ಥೆ ಮಾಡದೆ ಶಾಲಾ ಮಕ್ಕಳು ಪ್ರಯೋಜನ ವಂಚಿತರಾಗಿದ್ದಾರೆ.

