ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಅನೇಕ ಸಮಸ್ಯೆಗಳಿದ್ದು ಅಂತಹ ಸಮಸ್ಯೆಗಳನ್ನು ಆಯೋಗವು ಗಂಭೀರವಾಗಿ ಆಲಿಸಿ ಅವುಗಳಿಗೆ ಪರಿಹಾರ ಒದಗಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಅವರು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂವ್ಯಾಜ್ಯ, ಅಟ್ರಾಸಿಟಿ, ನಕಲಿ ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಗಣಿಸಲು ಅಧಿಕಾರಿಗಳು ಆಯೋಗದ ಜೊತೆಗೂಡಿ ಸರಿಪಡಿಸಬೇಕು. ಈ ಕಾರ್ಯವನ್ನು ರಾಜ್ಯಾದ್ಯಾಂತ ಚುರುಕುಗೊಳಿಸಲಾಗುವುದು ಎಂದರು.
ಪ್ರಕರಣಗಳ ವಿಳಂಬಕ್ಕೆ ಕಾರಣ ಸಂಪೂರ್ಣ ಅವಲೋಕನ ಮಾಡಿಕೊಂಡು ಸಮತೋಲನ ವಹಿಸಿ ಫಲಾನುಭವಿಗಳಿಗೆ ನ್ಯಾಯ ಕಲ್ಪಿಸಬೇಕು ಎಂದರು. ಈಗಾಗಲೇ
3850 ಪ್ರಕರಣಗಳ ಕಾರ್ಯ ನಡೆದಿದೆ. 4500 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದ ಅವರು, ಕಳೆದ ಆರು ತಿಂಗಳಿಂದ ಪ್ರತಿ ಗುರುವಾರ ಹಾಗೂ ಶುಕ್ರವಾರ ಆಲಿಸಿ, 300 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದರು.
ಒಟ್ಟಾರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮಸ್ಯೆಗಳನ್ನು ಆಲಿಸಿ ಆ ಸಮಸ್ಯೆಗಳನ್ನು ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯವನ್ನು ಆಯೋಗದಿಂದ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಇಂದಿನ ಸಭೆಯಲ್ಲಿ ಸ್ವೀಕರಿಸಲಾದ ದೂರು, ನ್ಯೂನತೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ತ್ವರಿತ ಪರಿಹಾರ ಕಲ್ಪಿಸಲಾಗುವುದು. ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಆಲಿಸಿದ ಹಾಗೂ ಸ್ವೀಕರಿಸಲಾದ ಅಹವಾಲುಗಳ ಕುರಿತ ವರದಿಯನ್ನು ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲಿಯೇ ಸಲ್ಲಿಸಲಾಗುವುದು ಎಂದು ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್. ತಿಳಿಸಿದರು.
ಸಮಾಜ ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿ, ಭೂ ಒಡೆತನ, ಹೆಚ್ಚುವರಿ ಜಮೀನು ಸಮಸ್ಯೆಗಳಿವೆ. ಮುಗ್ಧ ಜನರು ಜಮೀನು ಕಳೆದುಕೊಂಡ ಪ್ರಕರಣಗಳಿವೆ. ಅಂತಹ ಪ್ರಕರಣಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿ, ಆ ಪ್ರಕರಣಗಳಿಗೆ ನ್ಯಾಯ ಕಲ್ಪಿಸಬೇಕು ಎಂದು ಆಯೋಗದ ಅಧ್ಯಕ್ಷರನ್ನು ಕೋರಿದರು.
ಅಸ್ಪ್ರಶ್ಯತೆ ನಿವಾರಣೆಗೆ ಸಾಕಷ್ಟು ಜಾಗೃತಿ ಮೂಡಿಸಬೇಕು. ಅದಕ್ಕೆ ವಿಶೇಷ ಮುತುವರ್ಜಿ ವಹಿಸಬೇಕು. ಈ ವರ್ಗದವರಿಗಿರುವ ಸೌಲಭ್ಯ ದೊರಕಿಸಿಕೊಡಬೇಕು. ಈ ಜನಾಂಗದ ಅಭಿವೃದ್ಧಿ ಹಾಗೂ ಸಮಸ್ಯೆಗಳನ್ನು ಕಾನೂನು ರೀತ್ಯ ಇತ್ಯರ್ಥಪಡಿಸಬೇಕು ಎಂದೂ ಆಗ್ರಹಿಸಿದರು. ರಾಜಶೇಖರ ಕೂಚಬಾಳ ಮಾತನಾಡಿ, ಪೌರ ಕಾರ್ಮಿಕರಿಗೆ ಸಮರ್ಪಕ ವೇತನ ನೀಡಲು ಕ್ರಮ ವಹಿಸಬೇಕು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು,ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಸಂಜು ಕಂಬಾಗಿ ಮಾತನಾಡಿ, ಗಾಂವಠಾಣ ಜಾಗದಲ್ಲಿ ನಿರ್ಮಾಣ ಮಾಡಿಕೊಂಡಿದ್ದು, ಅನುಕೂಲ ಮಾಡಿಕೊಡಬೇಕು ಎಂಬ ಮನವಿಗೆ
ಆಯೋಗದಿಂದ ನ್ಯಾಯ ಕೊಡಿಸುವ ಭರವಸೆಯನ್ನು ಅಧ್ಯಕ್ಷರು ನೀಡಿದರು.
ರಾವುತ್ ತಳಕೇರಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಎಸ್ ಸಿಪಿ ಟಿಎಸ್ ಪಿ ಹಾಸ್ಟೆಲ್ ಅಧಿಕಾರಿಗಳ ನಿರ್ಲಕ್ಷ್ಯ ವಹಿಸದೇ ನಿಗಾ ವಹಿಸಬೇಕು. ಮೆನು ಚಾರ್ಟ್ ಪ್ರಕಾರ ಆಹಾರ ವಿತರಣೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಯೋಜನೆ ತಲುಪಲಿ, ವಸತಿ ನಿಲಯಗಳಲ್ಲಿ ಸಿಬ್ಬಂದಿ ಸರಿಯಾಗಿ ನಿಗಾ ವಹಿಸುವಂತೆ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಬೆಳಕು ಚೆಲ್ಲಬೇಕು ಎಂದರು.
ಪ್ರಕಾಶ ಗುಡಿಮನಿ ಮಾತನಾಡಿ, ತಾಪಂ ಸ್ಥಳೀಯ ಸಂಸ್ಥೆಗಳಿಗೆ ಅನುದಾನದ ಸದ್ಭಳಕೆಯಾಗಲಿ.
ಸಮುದಾಯ ಎದುರಿಸುವ ಕೆಲವು ಅನ್ಯಾಯ ತಡೆಗಟ್ಟಬೇಕು ಎಂದರು.
ಮಳಸಿದ್ದ ಲಕ್ಷ್ಮಣ ನಾಯ್ಕೋಡಿ ಮಾತನಾಡಿ, ನಕಲಿ ಜಾತಿ ಪ್ರಮಾಣ ಪತ್ರದ ಉಪಟಳಕ್ಕೆ ಬ್ರೇಕ್ ಹಾಕಬೇಕು ಎಂದರು.
ರಮೇಶ ಆಸಂಗಿ ಮಾತನಾಡಿ, ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯ ದೊರಕಿಸಿ ಕೊಟ್ಟು ಜಿಲ್ಲಾಡಳಿತ ಸ್ಪಂದಿಸಿದೆ ಎಂದು ಎಸ್ ಪಿ ಹಾಗೂ ಡಿಸಿ ಅವರನ್ನು ಪ್ರಶಂಸಿದರು.
ಭೀಮರಾಯ ಜಿಗಜಿಣಗಿ ಮಾತನಾಡಿ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುವವರಿಗೆ ಪೌರ ಕಾರ್ಮಿಕರ ಪರಿಸ್ಥಿತಿ ಗಂಭೀರವಾಗಿದೆ. ಹಾಗಾಗಿ ಪೌರ ಕಾರ್ಮಿಕರಿಗೆ ಸಮರ್ಪಕ
ವೇತನ ಒದಗಿಸಿಕೊಡುವ ನಿಟ್ಟಿನಲ್ಲಿ ಆಯೋಗಕ್ಕೆ ಕೋರಿದರು.
ಶ್ರೀನಾಥ ಪೂಜಾರಿ ಮಾತನಾಡಿ, ಬಾಡಿಗೆ ವಸತಿ ನಿಲಯಗಳು ಅವ್ಯವಸ್ಥೆಯನ್ನು ಸರಿಪಡಿಸಿ ಅಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ನಾಗಪ್ಪ ವಡ್ಡರ ಮಾತನಾಡಿ, ಸರ್ಕಾರದ ಮಾರ್ಗಸೂಚಿಗಳನ್ವಯ ಜಾತಿ ಪ್ರಮಾಣ ಪತ್ರ ನೀಡಲಿಕ್ಕೆ ಆಯೋಗ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಂತೆಯೇ ಆಯೋಗದ ಅಧ್ಯಕ್ಷರಾದ ಮೂರ್ತಿ ಮಧ್ಯ ಪ್ರವೇಶಿಸಿ, ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ಆಯೋಗ ನಿರ್ದಾಕ್ಷ್ಯಣ್ಯ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು.
ಸಿದ್ದು ರಾಯಣ್ಣವರ ಮಾತನಾಡಿ, ಸ್ಮಶಾನ ಜಾಗೆ ಕಬ್ಜಾ ಮಾಡಿಕೊಡುವ ಬಗ್ಗೆ ಗಮನಸೆಳೆದರು.
ಬಡವರಿಗೆ ಸೂರು ಒದಗಿಸಿಕೊಡುವ ಬಗ್ಗೆ, ದೇವಾನಂದ ಲಚ್ಯಾಣ ಮಾತನಾಡಿ, ಅಲೆಮಾರಿ ಸಮುದಾಯ ದೌರ್ಜನ್ಯ ಸಮಿತಿಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕ ಮಾಡಿ, ಅಲೆ ಮಾರಿ ಜನರಿಗೆ ನಿವೇಶನ ಒದಗಿಸುವುದು. ಇಂಡಿಯಲ್ಲಿ ಈ ಸಮುದಾಯಕ್ಕೆ ಜಾಗ ಒದಗಿಸಿರುವ ಜಿಲ್ಲಾಧಿಕಾರಿಗಳ ಕಾರ್ಯವನ್ನು ಬಣ್ಣಿಸಿದರು. ಸರ್ಕಾರದ ಯೋಜನೆಗಳಿಗೆ ಅಲೆಮಾರಿ ಸಮುದಾಯಗಳಿಗೆ ತಲುಪವಂತೆ ಮನವಿ ಮಾಡಿದರು.
ಚೆನ್ನು ಕಟ್ಟಿಮನಿ, ಪರಸುರಾಮ ರೋಣಿಹಾಳ, ರಾಜಪಾಲ ಚವ್ಹಾಣ ಮಾತನಾಡಿದರು.
ಸಭೆಯಲ್ಲಿ ಆಯೋಗದ ಸದಸ್ಯರಾದ ಸುನೀಲ ಉಕ್ಕಲಿ, ಎನ್ ದಿವಾಕರ್ ಹಾಗೂ ಶ್ರೀಮತಿ ಗೀತಾ ಥಾವಂಶಿ, ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ ಪೋತದಾರ, ಕಾರ್ಯದರ್ಶಿಗಳಾದ ಎಚ್. ಎಂ. ಶಿವರಾಂ, ಸಂಶೋಧನಾ ಅಧಿಕಾರಿ ಸಿಂದೂ ಎಚ್.ಎಸ್., ಬಿ.ಜೆ. ಇಂಡಿ ಸೇರಿದಂತೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.
ಬಾಕ್ಸ್
ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ
ಸಭೆಯಲ್ಲಿ ಪಜಾ, ಪಪಂ ಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಆಯೋಗದ ಗಮನಕ್ಕೆ ತಂದಿದ್ದೀರಿ. ಗೋಮಾಳ ಜಮೀನು, ಅಸ್ಪೃಶ್ಯತೆ ನಿವಾರಣೆ, ಕಾರ್ಮಿಕರ ವೇತನ, ವಸತಿ ನಿಲಯಗಳ ನಿರ್ವಹಣೆ, ಮನೆ ನಿರ್ಮಾಣ, ಪೌರ ಕಾರ್ಮಿಕರ ಸರಿಯಾದ ವೇತನ ಪಾವತಿ ಸೇರಿದಂತೆ ಅನೇಕ ಅರ್ಜಿಗಳನ್ನು ಸ್ವೀಕರಿಸಿದ್ದು ಆಯೋಗ ಸ್ಪಂದಿಸಲಿದೆ ಎಂದು ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ ಭರವಸೆ ನೀಡಿದರು.
ಸರ್ಕಾರದ ಆದೇಶಗಳ ಪಾಲನೆ, ಎಸ್ ಸಿಪಿ- ಟಿ ಎಸ್ ಪಿ, ಅನುದಾನ ಬಳಕೆ, ಜೇಷ್ಠತೆ ನಿರ್ವಹಣೆ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.
ಅಲೆಮಾರಿ ಸಮುದಾಯ ದೌರ್ಜನ್ಯ ಸಮಿತಿಯಲ್ಲಿ ಪ್ರಾತಿನಿಧಿತ್ವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಕಾನೂನಡಿ ಕ್ರಮಕೈಗೊಳ್ಳಲಾಗುವುದು. ಸ್ಮಶಾನ ಭೂಮಿ, ಕಂದಾಯ ಗ್ರಾಮ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ಟಾರೆ ಸಭೆಯಲ್ಲಿ ಆಲಿಸಲಾದ ಅಹವಾಲುಗಳನ್ನು ಆಯೋಗ ಸರ್ಕಾರದ ಗಮನ ಸೆಳೆಯಲಿದೆ ಎಂದು ಅಧ್ಯಕ್ಷರಾದ ಮೂರ್ತಿ ಭರವಸೆ ನೀಡಿದರು.

