ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ).
ವಿಜಯಪುರ
ಉದಯರಶ್ಮಿ ದಿನಪತ್ರಿಕೆ
ಖ್ಯಾತ ನೃತ್ಯಗಾರ ಮಾರ್ಥಾ ಗ್ರಹಾಂ ಅವರು “ನೃತ್ಯವು ಆತ್ಮದ ಗುಪ್ತ ಭಾಷೆ” ಎಂದು ಹೇಳಿದ್ದಾರೆ. ಅದರು ವ್ಯಕ್ತಿಯ ಮನದಲ್ಲಿನ ಆಂತರಿಕ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಒಂದು ಸಾಧನವೆಂದು ಹೇಳಬಹುದು. ಈ ಜಗತ್ತಿನಲ್ಲಿ ಅದೇಷ್ಟೋ ಕಲಾ ಪ್ರೇಮಿಗಳಿಗೆ ನೃತ್ಯವೇ ಜೀವಾಳ. ನೃತ್ಯ ಎನ್ನುವುದು ರಾಜ್ಯದಿಂದ ರಾಜ್ಯಕ್ಕೆ ವಿಭಿನ್ನವಾಗಿರಬಹುದು. ಆದರೆ ಅದರಿಂದ ಹೊರ ಹೊಮ್ಮುವ ಭಾವನೆ ಮತ್ತು ಮನಸ್ಸಿಗೆ ಮುದ ನೀಡುವ ಶಕ್ತಿಯೊಂದೇ ಎಂದು ಹೇಳಬಹುದು. ಈ ಸುಂದರ ಕಲಾ ಪ್ರಕಾರವನ್ನು ಆಚರಿಸಲು ಮತ್ತು ಜಾಗತಿಕವಾಗಿ ಇತರ ನೃತ್ಯ ಪ್ರಕಾರಗಳನ್ನು ಪೋಷಿಸಲು ಪ್ರತಿವರ್ಷ ಏಪ್ರೀಲ್ ೨೯ ರಂದು ಅಂತರಾಷ್ಟ್ರೀಯ ನೃತ್ಯ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನದ ಆಚರಣೆಯ ಮೂಲಕ ನಮ್ಮ ಕಲೆ-ಸಂಸ್ಕೃತಿಯನ್ನು ಎತ್ತಿ ಹಿಡಿದು ಗೌರವಿಸಿ, ಉತ್ತೇಜಿಸುವುದು ಮತ್ತು ನೃತ್ಯ ಕಲೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ನೃತ್ಯದ ಹಲವಾರು ಪ್ರಕಾರಗಳು, ಅದರ ಮೌಲ್ಯ ಮತ್ತು ನೃತ್ಯದಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವುದು. ಪ್ರಪಂಚದಾದ್ಯಂತ ನಡೆಯುವ ಕಾರ್ಯಕ್ರಮಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿ, ನೃತ್ಯ ಕಲಾವಿದರಿಗೆ ಮತ್ತು ಕಲಾ ಆರಾಧಕರಿಗೆ ಪ್ರೋತ್ಸಾಹ ನೀಡುವುದೇ ಈ ದಿನದ ಪ್ರಮುಖ ಉದ್ಧೇಶವಾಗಿದೆ.
ಜಗತ್ತಿನ ನೃತ್ಯ ಪ್ರಕಾರಗಳಲ್ಲಿ ಜಾಜ್, ಬ್ಯಾಲೆಟ್, ಸಾಲ್ಸಾ, ಪೋಲ್ ಡ್ಯಾನ್ಸಿಂಗ್, ಬಾಲ್ ರೂಂ ನರ್ತನ, ಭರತನಾಟ್ಯಂ, ಕಥಕ್, ಬೆಲ್ಲಿ ಡ್ಯಾನ್ಸ್, ಟ್ಯಾಪ್ ಡ್ಯಾನ್ಸ್, ಹಿಪ್-ಹಾಪ್ ಹೀಗೆ ವಿಶಿಷ್ಟ ಪ್ರಕಾರಗಳಿವೆ. ಅದರಲ್ಲೂ ನಮ್ಮ ಕಲೆ-ಸಂಸ್ಕೃತಿ ಮತ್ತು ಭವ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಒಡಿಸ್ಸಿ, ಭರತನಾಟ್ಯ, ತಾಂಡವ ನೃತ್ಯ, ಕುಚಿಪುಡಿ, ಕಥಕ್, ಚೌ ನೃತ್ಯ, ಕಥಕ್ಕಳಿ, ಮಣಿಪುರಿ, ಲಾವಣಿ, ಬಿಹೂ ಹೀಗೆ ದೇಶದ ವೈವಿಧ್ಯತೆಯನ್ನು ಅಭಿವ್ಯಕ್ತಗೊಳಿಸುವ ನೃತ್ಯ ಪ್ರಕಾರಗಳು ನಮ್ಮ ದೇಶದಲ್ಲಿವೆ.
ಆಚರಣೆಯ ಹಿನ್ನೆಲೆ

ನೃತ್ಯದ ಇತಿಹಾಸವು ಸಾವಿರಾರು ವರ್ಷಗಳಷ್ಟು ಹಿಂದಿನದಾಗಿದ್ದರೂ, ಅಂತರಾಷ್ಟ್ರೀಯ ದಿನಾಚರಣೆಯು ಪ್ರೆಂಚ್‌ನ ಆಧುನಿಕ ಬ್ಯಾಲೆ ನೃತ್ಯದ ಸೃಷ್ಟಿಕರ್ತ ಎಂದೇ ಹೆಸರುವಾಸಿಯಾಗಿದ್ದ ಜೀನ್ ಜಾರ್ಜಸ್ ನೋವರ‍್ರೆ ಅವರ ಜನ್ಮದಿನದ ಸ್ಮರಣಾರ್ಥ ಮೊಟ್ಟಮೊದಲು ಅಧಿಕೃತವಾಗಿ ೧೯೮೨ ರಲ್ಲಿ ಪ್ರಾರಂಭಗೊಂಡಿತು. ಇಂಟರನ್ಯಾಶನಲ್ ಧಿಯೇಟರ್ ಇನಸ್ಟಿಸ್ಟೂಟ್ (ಐ.ಟಿ.ಐ) ನ ಡ್ಯಾನ್ಸ್ ಕಮೀಟಿ ಮತ್ತು ಯನೆಸ್ಕೋ ಪ್ರದರ್ಶನ ಕಲೆಗಳ ಪ್ರಮುಖ ಪಾಲದಾರರಾಗಿ ಈ ದಿನವನ್ನು ಆಚರಿಸಲು ಕರೆ ಕೊಟ್ಟಿತು. ಜನರನ್ನು ಒಟ್ಟುಗೂಡಿಸಲು, ನೃತ್ಯದ ಪ್ರಯೋಜನಗಳನ್ನು ಉತ್ತೇಜಿಸಲು ಮತ್ತು ನೃತ್ಯದಿಂದ ಆನಂದವನ್ನು ಸವಿಯಲು ಈ ಅಂತರಾಷ್ಟ್ರೀಯ ನೃತ್ಯ ದಿನವನ್ನು ವಿಶ್ವದಾದ್ಯಂತ ಏಪ್ರೀಲ್ ೨೯ ರಂದು ಆಚರಿಸಲಾಗುತ್ತಿದೆ. ನೃತ್ಯವು ಕಲಾತ್ಮಕ ಅಭಿವ್ಯಕ್ತಿಯ ಒಂದು ರೂಪವಾಗಿದ್ದು, ವ್ಯಕ್ತಿಯ ಆತಂಕ, ದುಃಖ, ಆಘಾತಕಾರಿ ಸಂಗತಿಯ ನಂತರದ ಒತ್ತಡದ ಅಸ್ವಸ್ಥತೆಯನ್ನು ನಿವಾರಿಸುವ ದಿವ್ಯ ಔಷಧವಾಗಿದೆ ಎಂದು ಹೇಳಬಹುದು. ನೃತ್ಯವು ವೃತ್ತಿಪರ ಕಲಾ ಪ್ರಕಾರವೆಂದು ಇಡೀ ಜಗತ್ತು ಗುರುತಿಸಲು ಮತ್ತು ನೃತ್ಯದ ಮೂಲಕ ಮೋಡಿ ಮಾಡಿ ತಮ್ಮ ಇಡೀ ಜೀವನವನ್ನೇ ನೃತ್ಯಕ್ಕಾಗಿಯೇ ಮುಡಿಪಾಗಿಟ್ಟ ಶ್ರೇಷ್ಠ ನೃತ್ಯ ಸಾಧಕರಿಗೆ ಗೌರವ ನೀಡುವ ದಿನ ಇದಾಗಿದೆ.
ಈ ದಿನದ ಆಚರಣೆಯ ಮೂಲಕ ಜಗತ್ತಿನಾದ್ಯಂತ ನೃತ್ಯದ ಮಹತ್ವ, ವಿವಿಧ ಪ್ರಕಾರಗಳು, ನೃತ್ಯದ ಪ್ರಯೋಜನ ಮತ್ತು ನಮ್ಮ ಕಲೆ-ಸಂಸ್ಕೃತಿ, ಭವ್ಯ ಪರಂಪರೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ನೃತ್ಯಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಲು ಸೂಕ್ತ ಪ್ರೋತ್ಸಾಹ ಮತ್ತು ಉತ್ತೇಜನ ನೀಡಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ನೃತ್ಯದ ಬಗ್ಗೆ ಮಹತ್ವವನ್ನು ಸಾರುತ್ತಾ ಯುವ ಜನಾಂಗವು ನೃತ್ಯ ಒಂದು ಕಲಾರಂಗದ ಪ್ರಮುಖ ಚಟುವಟಿಕೆ ಎನ್ನುವದನ್ನು ಅರಿತುಕೊಂಡು ತನ್ಮೂಲಕ ನೃತ್ಯದಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೇರೇಪಿಸಬೇಕಾಗಿದೆ.
೨೦೨೫ ನೇಯ ವರ್ಷದ ಘೋಷವಾಕ್ಯ
ಜಾಗತಿಕವಾಗಿ ನೃತ್ಯ ಕಲೆಯನ್ನು ಪ್ರಚುರಪಡಿಸಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು “ಎಲ್ಲರಿಗಾಗಿ ನೃತ್ಯ” ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ಅಂತರಾಷ್ಟ್ರೀಯ ನೃತ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇದು ಸಾಂಸ್ಕೃತಿಕ ಮತ್ತು ಭಾಷೆಯ ಎಲ್ಲ ಗಡಿಗಳನ್ನು ಮೀರಿದ ನೃತ್ಯವು ಸಾರ್ವತ್ರಿಕ ಭಾಷೆಯಾಗಿದೆ. ಜನರನ್ನು ಒಟ್ಟುಗೂಡಿಸುವಲ್ಲಿ ಮತ್ತು ಸಾಂಸ್ಕೃತಿಕ ತಿಳುವಳಿಕೆಯನ್ನು ಉತ್ತೇಜಿಸುವಲ್ಲಿ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ನೃತ್ಯದ ಮಹತ್ವವನ್ನು ಎತ್ತಿ ತೋರಿಸುತ್ತದೆ.
ನೃತ್ಯದ ಮಹತ್ವ

ನೃತ್ಯ ಕಲೆಯು ಮಾನವನಿಗೆ ತಿಳಿದಿರುವ ಅತ್ಯಂತ ಸಾಂಪ್ರದಾಯಿಕ ಮತ್ತು ದೀರ್ಘಕಾಲಿನ ಮನರಂಜನೆಯ ಮತ್ತು ಸಮುದಾಯಿಕ ಚಟುವಟಿಕೆ. ನೃತ್ಯ ಅಥವಾ ನರ್ತನ ವ್ಯಕ್ತಿಯ ಭಾವನೆಗಳನ್ನು ಪ್ರಕಟಿಸಿ ತನ್ಮಯತೆ ಅನುಭವಿಸುವ ಅನುಭೂತಿಯಾಗಿದೆ. ನೃತ್ಯ ಮನಸ್ಸನ್ನು ಪ್ರಫುಲಿತಗೊಳಿಸುವ, ಮನರಂಜಿಸುವ ಮತ್ತು ಮನಸ್ಸು ಮತ್ತು ಶರೀರವನ್ನು ಆರೋಗ್ಯಕರವಾಗಿಸುವ ಅತ್ಯುತ್ತಮ ಚಟುವಟಿಕೆಯಾಗಿದೆ. ನೃತ್ಯವು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವ ಮತ್ತು ಮೆದುಳಿನ ಹಿಪ್ಪೋಕ್ಯಾಂಪಸ್ ಎಂಬ ಭಾಗದ ಪರಿಮಾಣ ಕುಗ್ಗುವ ಗತಿಯನ್ನು ಬದಲಿಸುತ್ತದೆ ಅಥವಾ ನಿಧಾನವಾಗಿಸುತ್ತದೆ. ಸಂಗೀತದ ಲಯಬದ್ಧತೆಯೊಂದಿಗೆ ನರ್ತಿಸುವ ವ್ಯಕ್ತಿಯ ಮಾನಸಿಕ ಒತ್ತಡವನ್ನು ಬಿಡುಗಡೆಯಾಗುತ್ತದೆ. ಸಂಗೀತ ಮತ್ತು ನೃತ್ಯದಿಂದ ಮನುಷ್ಯನಲ್ಲಿರುವ ಮಾನಸಿಕ ಖಿನ್ನತೆ, ಆತಂಕ, ಏಕಾಂಗಿತನ ಮತ್ತು ಋಣಾತ್ಮಕ ಮನಸ್ಥಿತಿಯನ್ನು ಹೋಗಲಾಡಿಸಿ ಚೈತನ್ಯವನ್ನು ತುಂಬುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ನೃತ್ಯದಲ್ಲಿ ವಿಶ್ವದಾದ್ಯಂತ ಇರುವ ವೈವಿಧ್ಯಮ ಸಂಸ್ಕೃತಿ, ಆಚರಣೆ, ಪರಂಪರೆ, ಇತಿಹಾಸ ಮತ್ತು ಕಲೆಯು ಅಭಿವ್ಯಕ್ತಿಗೊಳ್ಳುತ್ತದೆ. ಬುಡಕಟ್ಟು ಜನರಿಂದ ಹಿಡಿದು ಸುಸಂಸ್ಕೃತದವರೆಗೂ ನೃತ್ಯವು ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ.
ಕೊನೆಯ ನುಡಿ
ಶ್ರೇಷ್ಠ ನೃತ್ಯ ಕಲಾವಿದ ಲ್ಯಾಲ್ ವ್ಯಾಟ್ಸನ್ ಅವರು “ನೃತ್ಯವು ಎಲ್ಲಾ ರೀತಿಯ ಅಭಿವ್ಯಕ್ತಿಗಳಲ್ಲಿ ಅತ್ಯಂತ ಮೂಲಭೂವಾದದ್ದು, ಅದು ಆಂತರಿಕ ಭಾವನೆ ಮತ್ತು ಅನುಭವಕ್ಕೆ ಬಾಹ್ಯ ರೂಪವನ್ನು ಕೊಟ್ಟಷ್ಟು ಬೇರೆ ಯಾವುದೂ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ನೀಡುವ ಕಲೆಗೆ ಬೆಲೆ ನೀಡಿ, ಗೌರವಿಸುವಂತಾಗಬೇಕು. ಪಾಶ್ಚಾತ್ಯೀಕರಣ ಮತ್ತು ಸಮೂಹ ಮಾಧ್ಯಮಗಳ ಪ್ರಭಾವದಿಂದ ಮರೆಯಾಗುತ್ತಿರುವ ನಮ್ಮ ಈ ನೃತ್ಯ ಕಲೆಗೆ ನಾವೆಲ್ಲರೂ ಅಗತ್ಯ ವೇದಿಕೆ ಕಲ್ಪಿಸಿ, ಸೂಕ್ತ ಪ್ರೋತ್ಸಾಹ ನೀಡಬೇಕು. ನಮ್ಮ ಕಲಾತ್ಮಕವಾದ ನೃತ್ಯ ಸಂಸ್ಕೃತಿಯು ಮುಂದಿನ ಯುವ ಜನಾಂಗಕ್ಕೆ ತಿಳಿಸಿಕೊಟ್ಟು, ಅದನ್ನು ಉಳಿಸಿ-ಬೆಳೆಸುವ ಕಾರ್ಯ ನಡೆಯಬೇಕು. ಇಂದಿನ ಆಧುನಿಕ ಮತ್ತು ಸಂಕೀರ್ಣಮಯವಾದ ಜೀವನದಲ್ಲಿ ಮನದಲ್ಲಿನ ಆತಂಕ, ದುಗುಡ, ಖಿನ್ನತೆ, ಒತ್ತಡವನ್ನು ದೂರಾಗಿಸಿ ಕೊಂಚ ಶಾಂತಿ ಮತ್ತು ನೆಮ್ಮದಿ ನೀಡುತ್ತಾ, ದೇಹ-ಮನಸ್ಸುಗಳ ಆರೋಗ್ಯವನ್ನು ಕಾಪಾಡಲು ನೃತ್ಯವು ಸಹಕಾರಿಯಾಗಿದೆ. ಆದ್ದರಿಂದ ನಾವು ನೃತ್ಯ ಕಲೆಗೆ ಗೌರವಿಸಿ, ಪ್ರೋತ್ಸಾಹಿಸುತ್ತಾ, ಮುಂದಿನ ಪೀಳಿಗೆಗೆ ಅದರ ಮಹತ್ವದ ಸಂದೇಶವನ್ನು ಸಾರಿದರೆ ಮಾತ್ರ ಈ ದಿನದ ಆಚರಣೆಯು ನಿಜಕ್ಕೂ ಅರ್ಥಪೂರ್ಣ ಆಗುವುದರಲ್ಲಿ ಎರಡು ಮಾತಿಲ್ಲ.


